ವಕ್ಫ್ ಬೋರ್ಡ್ ತಿದ್ದುಪಡಿ ವಿರೋಧಿಸಲು ಸಿದ್ದರಾಮಯ್ಯಗೆ ಮನವಿ ಮಾಡಿದ ಮುಸ್ಲಿಂ ನಾಯಕರು

Krishnaveni K

ಶನಿವಾರ, 31 ಆಗಸ್ಟ್ 2024 (15:16 IST)
ಬೆಂಗಳೂರು: ಕೇಂದ್ರ ಸರ್ಕಾರ ತರಲು ಉದ್ದೇಶಿಸಿರುವ ವಕ್ಫ್ ಬೋರ್ಡ್ ತಿದ್ದುಪಡಿ ಕಾಯ್ದೆಯ ವಿರುದ್ಧ ಧ್ವನಿಯೆತ್ತುವಂತೆ ಇಂದು ಮುಸ್ಲಿಂ ಧರ್ಮ ಗುರುಗಳ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.

ಕಳೆದ ಬಾರಿ ಲೋಕಸಭೆ ಕಲಾಪದಲ್ಲಿ ಕೇಂದ್ರ ಸರ್ಕಾರ ವಕ್ಫ್ ಬೋರ್ಡ್ ಕಾಯ್ದೆ ತಿದ್ದುಪಡಿ ವಿಧೇಯಕ ಮಂಡಿಸಿತ್ತು. ಆದರೆ ಇದಕ್ಕೆ ಮಿತ್ರ ಪಕ್ಷಗಳಿಂದಲೇ ವಿರೋಧ ವ್ಯಕ್ತವಾಗಿದ್ದರಿಂದ ಇದರ ಬಗ್ಗೆ ವಿಚಾರ ಮಾಡಿಯೇ ಮುಂದುವರಿಯಲು ತೀರ್ಮಾನಿಸಿತ್ತು. ಆದರೆ ಈ ಮಸೂದೆಯನ್ನು ಜಾರಿಗೆ ತರುವ ಉದ್ದೇಶ ಕೇಂದ್ರ ಸರ್ಕಾರಕ್ಕಿದೆ.

ಹೀಗಾಗಿ ಇಂದು ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ನ ಧರ್ಮಗುರುಗಳ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾವೇರಿ ನಿವಾಸದಲ್ಲಿ ಭೇಟಿಯಾಗಿ ಕೇಂದ್ರ ಸರ್ಕಾರ ತರಲು ಹೊರಟಿರುವ ವಕ್ಫ್ ತಿದ್ದುಪಡಿ ಕಾಯ್ದೆ-2024 ರ ಕುರಿತಂತೆ ತಮ್ಮ ಕಾಳಜಿಗಳನ್ನು ವ್ಯಕ್ತಪಡಿಸಿ ಮನವಿ ಸಲ್ಲಿಸಿತು. ಈ ವೇಳೆ ಸಚಿವ ಜಮೀರ್ ಅಹ್ಮದ್ ಖಾನ್ ಕೂಡಾ ಇದ್ದರು.

ಈಗಾಗಲೇ ಸಿಎಂ ಸಿದ್ದರಾಮಯ್ಯ ವಕ್ಫ್ ಬೋರ್ಡ್ ತಿದ್ದುಪಡಿ ನಿಯಮಾವಳಿ ವಿಚಾರವಾಗಿ ತಮ್ಮ ನಿಲುವು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದರು. ಇದು ಮುಸ್ಲಿಮರ ವೈಯಕ್ತಿಕ ವಿಚಾರವಾಗಿದ್ದು ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಕೈ ಹಾಕಬಾರದು ಎಂದು ಅಭಿಪ್ರಾಯಪಟ್ಟಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ