ಬೆಂಗಳೂರು: ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿರುವ ವಕ್ಫ್ ಬೋರ್ಡ್ ಮಸೂದೆ ಬಗ್ಗೆ ಪ್ರತಿಕ್ರಿಯಿಸಿದ್ದ ಸಿಎಂ ಸಿದ್ದರಾಮಯ್ಯ ಅದು ಮುಸ್ಲಿಮರ ವೈಯಕ್ತಿಕ ಕಾನೂನು, ಅವರ ಧರ್ಮಕ್ಕೆ ಸಂಬಂಧಿಸಿದ ವಿಚಾರದಲ್ಲಿ ಕೇಂದ್ರ ತಲೆತೂರಿಸಬಾರದು ಎಂದು ಹೇಳಿಕೆ ನೀಡಿದ್ದರು.
ಅವರ ಈ ಹೇಳಿಕೆ ಹಿಂದೂಗಳನ್ನು ಕೆರಳಿಸಿದೆ. ವಕ್ಫ್ ಬೋರ್ಡ್ ಕುರಿತಂತೆ ನಿನ್ನೆ ಕೇಂದ್ರದ ಎನ್ ಡಿಎ ಸರ್ಕಾರ ಕಾನೂನಿಗೆ ತಿದ್ದುಪಡಿ ತರುವ ಹೊಸ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿತ್ತು. ಇದಕ್ಕೆ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ್ದವು. ವಕ್ಫ್ ಬೋರ್ಡ್ ನ ಅಧಿಕಾರ ವ್ಯಾಪ್ತಿಗೆ ಕತ್ತರಿ ಹಾಕುವ ಮಸೂದೆ ಇದಾಗಿತ್ತು.
ಬೇಕಾಬಿಟ್ಟಿ ಆಸ್ತಿ ಕಬಳಿಕೆ ಮಾಡುವಂತಿಲ್ಲ. ಇದಕ್ಕೆ ಇನ್ನು ಮುಂದೆ ಕೆಲವು ತಿದ್ದುಪಡಿ ತರಲಾಗುವುದಾಗಿ ಮಸೂದೆಯಲ್ಲಿ ಹೇಳಲಾಗಿದೆ. ಇದರ ಬಗ್ಗೆ ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ. ಈ ವಿಚಾರವಾಗಿ ಸಿದ್ದರಾಮಯ್ಯ ಕೂಡಾ ಪ್ರತಿಕ್ರಿಯಿಸಿದ್ದರು. ಕೇಂದ್ರ ಸರ್ಕಾರ ಅಲ್ಪ ಸಂಖ್ಯಾತರ ವಿರೋಧಿ. ಅದಕ್ಕೇ ವಕ್ಫ್ ಬೋರ್ಡ್ ವಿಚಾರದಲ್ಲಿ ತಿದ್ದುಪಡಿ ಮಾಡುತ್ತಿದೆ. ವಕ್ಫ್ ಬೋರ್ಡ್ ಆ ಸಮುದಾಯದ ಕಾನೂನು. ಅದರಲ್ಲಿ ನಾವು ತಲೆ ಹಾಕಬಾರದು ಎಂದು ಸಿದ್ದರಾಮಯ್ಯ ಹೇಳಿದ್ದರು.
ಇದಕ್ಕೆ ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಕ್ಫ್ ಬೋರ್ಡ್ ಮುಸ್ಲಿಮರದ್ದು. ಅವರ ಧರ್ಮದ ವಿಚಾರದಲ್ಲಿ ನಾವು ತಲೆ ಹಾಕಬಾರದು. ಆದರೆ ಹಿಂದೂಗಳ ದೇವಾಲಯದ ಹುಂಡಿಗೆ ನೀವು ಕೈ ಹಾಕಬಹುದೇ? ಹಿಂದೂ ದೇವಾಲಯಗಳ ಮೇಲೆ ಯಾಕೆ ಸರ್ಕಾರಗಳ ನಿಯಂತ್ರಣ ಎಂದು ನೆಟ್ಟಿಗರು ಸಿದ್ದರಾಮಯ್ಯ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.