ವಿಶ್ವವಿಖ್ಯಾತ ಜಂಬೂಸವಾರಿಗೆ ಮೈಸೂರು ಸಜ್ಜು: ಆರನೇ ಬಾರಿ ಅಂಬಾರಿ ಹೊರಲಿರುವ ಅಭಿಮನ್ಯು
Sampriya
ಗುರುವಾರ, 2 ಅಕ್ಟೋಬರ್ 2025 (10:23 IST)
ಮೈಸೂರು: ಮೈಸೂರು ದಸರಾ ಜಂಬೂಸವಾರಿ ಇಂದು ನಡೆಯಲಿದೆ. ಸತತ ಆರನೇ ಬಾರಿ ಅಂಬಾರಿಯನ್ನು ಅಭಿಮನ್ಯು ಹೊರಲಿದ್ದಾನೆ.
ವಿಶ್ವವಿಖ್ಯಾತ ಜಂಬೂಸವಾರಿಗೆ ಕ್ಷಣಗಣನೆ ಶುರುವಾಗಿದೆ. ಅರಮನೆಯಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ. ಜಂಬೂಸವಾರಿ ಕಣ್ತುಂಬಿಕೊಳ್ಳಲು ಲಕ್ಷಾಂತರ ಜನ ಕಾತರರಾಗಿದ್ದಾರೆ.
415ನೇ ದಸರಾ ಮಹೋತ್ಸವಕ್ಕೆ ಅರಮನೆ ನಗರಿ ಮೈಸೂರು ಸಜ್ಜಾಗಿದೆ. ಬೆಳಗ್ಗೆ 9:30ರಿಂದ 10ಕ್ಕೆ ಪಟ್ಟದ ಆನೆ, ಕುದುರೆ, ಹಸು ಮತ್ತು ಖಾಸಾ ಆಯುಧಗಳೊಂದಿಗೆ ಅರಮನೆ ವಾಹನಗಳಿಗೆ ಪೂಜೆ ಸಲ್ಲಿಸಲಾಗುತ್ತದೆ
ಬೆಳಗ್ಗೆ 9:45ಕ್ಕೆ ವಜ್ರಮುಷ್ಠಿ ಕಾಳಗ ನಡೆಯಲಿದೆ. ಬೆಳಗ್ಗೆ 10:50ರಿಂದ 11:10ಕ್ಕೆ ಬನ್ನಿಪೂಜೆ ನಡೆಯಲಿದೆ. ಬಳಿಕ ಅರಮನೆ ಅಂಗಳದಲ್ಲಿರುವ ಭುವನೇಶ್ವರಿ ದೇಗುಲಕ್ಕೆ ವಿಜಯಯಾತ್ರೆ ನಡೆಯಲಿದೆ. ಬಳಿಕ ವಿಜಯಯಾತ್ರೆ ಅರಮನೆಗೆ ವಾಪಸ್ಸಾಗಲಿದೆ.
ಬೆಳಗ್ಗೆ 10ರಿಂದ 10:30ರ ಸುಮಾರಿಗೆ ಚಾಮುಂಡಿಬೆಟ್ಟದಿಂದ ತಾಯಿ ವಿಗ್ರಹ ಅರಮನೆಗೆ ಬರಲಿದೆ. ಮಧ್ಯಾಹ್ನ 1ರಿಂದ 1:8ರ ಶುಭ ಧನುರ್ ಲಗ್ನದಲ್ಲಿ ಸಿಎಂ ಸಿದ್ದರಾಮಯ್ಯ ನಂದಿಧ್ವಜಕ್ಕೆ ಪೂಜೆ ನೆರವೇರಿಸಲಿದ್ದಾರೆ. ಮಧ್ಯಾಹ್ನ 3:40ರ ಬಳಿಕ ಚಿನ್ನದ ಅಂಬಾರಿ ಕಟ್ಟಲಾಗುತ್ತೆ. ಸಂಜೆ 4:42ರಿಂದ 5:06 ಗಂಟೆಗೆ ಪುಷ್ಪಾರ್ಚನೆ ನೆರವೇರಲಿದೆ. ಅರಮನೆಯಿಂದ ಬನ್ನಿಮಂಟಪದವರೆಗೆ ಜಂಬೂಸವಾರಿ ನಡೆಯಲಿದ್ದು, ಕ್ಯಾಪ್ಟನ್ ಅಭಿಮನ್ಯು ಅಂಬಾರಿ ಹೊರಲಿದ್ದಾನೆ. ಸಂಜೆ 7 ಗಂಟೆಗೆ ಪಂಜಿನ ಕವಾಯತು ನಡೆಯಲಿದೆ.