ಬೆಂಗಳೂರು, ಅ.18 : ಮಂಡ್ಯ ಮೈಷುಗರ್ ಕಾರ್ಖಾನೆ ಖಾಸಗೀಕರಣ ಮಾಡುವ ಪ್ರಸ್ತಾಪ ಸದ್ಯಕ್ಕೆ ಇಲ್ಲ. ಮೂರು ತಿಂಗಳಲ್ಲಿ ಕಾರ್ಖಾನೆ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ವಿಧಾನೌಧದಲ್ಲಿಂದು ಮಂಡ್ಯಮೈಷುಗರ್ ಕಾರ್ಖಾನೆ ಪುನಶ್ಚೇತನಕ್ಕೆ ಸಂಬಂಸಿದಂತೆ ಮಂಡ್ಯ ಜಿಲ್ಲೆಯ ಜನಪ್ರತಿನಿಗಳು, ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರಿಗೆ ಸಿಎಂ ಈ ವಿಷಯ ತಿಳಿಸಿದರು. ಕಾರ್ಖಾನೆಯ ದಕ್ಷ ಅಧಿಕಾರಿಯನ್ನು ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಕ ಮಾಡಲು ತೀರ್ಮಾನಿಸಲಾಗಿದೆ. ಕಾರ್ಖಾನೆ ಮುಂದುವರೆಸಲು ಸರ್ಕಾರ ಅಗತ್ಯ ಹಣಕಾಸಿನ ನೆರವು ನೀಡಲಿದೆ ಎಂದು ಹೇಳಿದರು.
ಕೇವಲ ಸಕ್ಕರೆ ಉತ್ಪಾದನೆಯಿಂದ ಕಾರ್ಖಾನೆ ನಡೆಸಲು ಆಗುವುದಿಲ್ಲ. ಕಬ್ಬಿನ ಉಪ ಉತ್ನನ್ನಗಳನ್ನು ತಯಾರಿಸಲು ಆದ್ಯತೆ ನೀಡಬೇಕಾಗಿದೆ. ತಂತ್ರಜ್ಞಾನ ಹಾಗೂ ಯಂತ್ರೋಪಕರಣಗಳನ್ನು ಸರಿಪಡಿಸಬೇಕಾಗಿದ್ದು, ಈಗಿನಿಂದಲೇ ಕ್ರಮ ಕೈಗೊಳ್ಳಲಾಗುವುದು. ಕಾರ್ಖಾನೆಯ ಸ್ಥಿತಿಗತಿಯ ಬಗ್ಗೆ ಗಂಭೀರ ಚರ್ಚೆ ನಡೆಸಲಾಯಿತು. ಪುನಶ್ಚೇತನ ಮಾಡುವ ಬಗ್ಗೆ ಜಿಲ್ಲೆಯ ಜನಪ್ರತಿನಿಗಳು ಹಲವು ಸಲಹೆಗಳನ್ನು ನೀಡಿದ್ದಾರೆ ಎಂದರು.