ಪೇಂಟ್-ರಸಾಯನಿಕ ತಯಾರಿಕೆ ಕಾರ್ಖಾನೆಯಲ್ಲಿ ಭಾರಿ ಅಗ್ನಿ ಅವಘಡ

ಶನಿವಾರ, 11 ಸೆಪ್ಟಂಬರ್ 2021 (13:05 IST)
ಪಾಲ್ಘರ್ : ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಬೋಯಿಸಾರ್ ಕೈಗಾರಿಕಾ ಪ್ರದೇಶದಲ್ಲಿ ಸಂಭವಿಸಿದ ಭಾರಿ ಅಗ್ನಿ ಅವಘಡದಲ್ಲಿ ಪೇಂಟ್ ಮತ್ತು ರಾಸಾಯನಿಕಗಳನ್ನು ತಯಾರಿಸುವ ಕಾರ್ಖಾನೆಯು ಸಂಪೂರ್ಣವಾಗಿ ಸುಟ್ಟುಹೋಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೋಯಿಸಾರ್ನ ತಾರಾಪುರ ಎಂಐಡಿಸಿ (ಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ನಿಗಮ)ಯಲ್ಲಿರುವ ಘಟಕದಲ್ಲಿ ಬೆಳಗಿನ ಜಾವ 2 ಗಂಟೆಗೆ ಬೆಂಕಿ ಹೊತ್ತಿಕೊಂಡಿದ್ದು, ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಘಟಕದ ಮುಖ್ಯಸ್ಥ ವಿವೇಕಾನಂದ ಕದಂ ತಿಳಿಸಿದ್ದಾರೆ.
'ದೊಡ್ಡದಾಗಿಯೇ ಬೆಂಕಿ ಆವರಿಸಿತ್ತು ಮತ್ತು ದೂರಕ್ಕೆ ಜ್ವಾಲೆಗಳು ಕಾಣಿಸುತ್ತಿದ್ದವು. ಹೀಗಾಗಿ ಬಣ್ಣಗಳನ್ನು ತುಂಬಿದ್ದ ಹಲವಾರು ಡ್ರಮ್ಗಳು ಸ್ಫೋಟಗೊಂಡವು. ಇದರಿಂದಾಗಿ ಜೋರಾಗಿ ಶಬ್ದ ಉಂಟಾಯಿತು. ಗಣೇಶ ಚತುರ್ಥಿಯ ನಿಮಿತ್ತ ಶುಕ್ರವಾರ ರಜಾದಿನವಾಗಿದ್ದರಿಂದ ಸ್ಥಳದಲ್ಲಿ ಇಬ್ಬರು ಸಿಬ್ಬಂದಿ ಮಾತ್ರ ಇದ್ದರು' ಎಂದು ಅವರು ಹೇಳಿದ್ದಾರೆ.
ಎಂಐಡಿಸಿ ಅಗ್ನಿಶಾಮಕ ಠಾಣೆಯ ಮೂರು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿವೆ ಮತ್ತು ಮೂರು ಗಂಟೆಗಳ ನಂತರ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು ಎಂದು ಅವರು ಹೇಳಿದರು.
ಸ್ಥಳೀಯ ಅಗ್ನಿಶಾಮಕ ದಳದ ಸಿಬ್ಬಂದಿ ಹೊರತುಪಡಿಸಿ, ಘಟನೆ ಬಗ್ಗೆ ತಿಳಿದ ಬಳಿಕ ವಿಪತ್ತು ನಿಯಂತ್ರಣ ಪಡೆಯ ತಂಡಗಳು ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಸದ್ಯ ಕೂಲಿಂಗ್ ಕಾರ್ಯಾಚರಣೆ ನಡೆಯುತ್ತಿದೆ. ಕಾರ್ಖಾನೆಯಲ್ಲಿ ಉಂಟಾದ ಬೆಂಕಿಯಿಂದಾಗಿ ಆ ಪ್ರದೇಶದಲ್ಲಿ ದುರ್ವಾಸನೆ ಉಂಟಾಗಿದೆ' ಎಂದು ಕದಂ ಹೇಳಿದ್ದಾರೆ. ಸದ್ಯ ಬೆಂಕಿ ಹೊತ್ತಿಕೊಳ್ಳಲು ಕಾರಣವೇನೆಂಬುದನ್ನು ತಿಳಿಯಲು ತನಿಖೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ