ಕರ್ನಾಟಕ ಕಾಂಗ್ರೆಸ್ಸಿನ ರೋಗದ ತನಿಖೆ ಮಾಡಿ: ಎನ್.ರವಿಕುಮಾರ್ ಆಗ್ರಹ

Krishnaveni K

ಶನಿವಾರ, 17 ಮೇ 2025 (16:40 IST)
ಬೆಂಗಳೂರು: ಕರ್ನಾಟಕದ ಕಾಂಗ್ರೆಸ್‍ಗೆ ಏನು ರೋಗ ಬಂದಿದೆ ಎಂದು ಕಾಂಗ್ರೆಸ್ ಹೈಕಮಾಂಡ್ ತನಿಖೆ ನಡೆಸಲಿ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಅವರು ಆಗ್ರಹಿಸಿದ್ದಾರೆ. 
 
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಪಾಕಿಸ್ತಾನದ ಪರವಾಗಿ ವಕ್ತಾರರು ಜಾಸ್ತಿಯಾಗಿದ್ದಾರೆ. ಕೋಲಾರದ ಕಾಂಗ್ರೆಸ್ ಶಾಸಕ ಮಂಜುನಾಥ್, ಸಚಿವರಾದ ಪ್ರಿಯಾಂಕ್ ಖರ್ಗೆ, ಸಂತೋಷ್ ಲಾಡ್ ಅವರು ಪಾಕಿಸ್ತಾನದ ಪರವಾಗಿ ಮಾತನಾಡುತ್ತಿದ್ದಾರೆ. ಸೇನಾ ನೆಲೆ, ಭಯೋತ್ಪಾದಕರ ಕೇಂದ್ರಗಳು ಸೇರಿ ತಮ್ಮ ಮೇಲೆ ದಾಳಿ ಆದುದನ್ನು ಪಾಕಿಸ್ತಾನವೇ ಒಪ್ಪಿಕೊಂಡಿದೆ. ಅದಲ್ಲದೇ, ಅಜರ್ ಮಸೂದ್ ಸಂಬಂಧಿಕರ ಮತ್ತು ಕುಟುಂಬದವರ ಹತ್ಯೆ ಹಿನ್ನೆಲೆಯಲ್ಲಿ 14 ಕೋಟಿಯನ್ನು ಪಾಕಿಸ್ತಾನ ಸರಕಾರವೇ ಆ ಕುಟುಂಬಕ್ಕೆ ಕೊಟ್ಟಿದೆ ಎಂದು ಗಮನ ಸೆಳೆದರು.
 
ಪ್ರಿಯಾಂಕ್ ಖರ್ಗೆ ಯಾರನ್ನು ನಂಬುತ್ತಾರೆ?
ತಾವು ಗೆದ್ದುದಾಗಿ ಪಾಕಿಸ್ತಾನ ಹೇಳಿದೆಯಲ್ಲವೇ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಈ ಕಡೆ ಪ್ರಧಾನಿ, ನಮ್ಮ ಸೇನೆಯು ನಾವು ಗೆದ್ದಿದ್ದೇವೆ ಎಂದಿದ್ದಾರೆ. ಪ್ರಿಯಾಂಕ್ ಖರ್ಗೆ ಅವರು ಭಾರತವನ್ನು ನಂಬುತ್ತಾರಾ? ಪಾಕಿಸ್ತಾನವನ್ನು ನಂಬುತ್ತಾರಾ ಎಂದು ಎನ್. ರವಿಕುಮಾರ್ ಅವರು ಕೇಳಿದರು. ಪ್ರಿಯಾಂಕ್ ಖರ್ಗೆ ಮಾತನ್ನು ಗಮನಿಸಿದರೆ ಪಾಕಿಸ್ತಾನವನ್ನು ನಂಬುವುದು ಅರ್ಥವಾಗುತ್ತದೆ ಎಂದು ಟೀಕಿಸಿದರು.

ಚಿತ್ತಾಪುರದ ಸಾವಿರಾರು ಜನರು ಪ್ರಿಯಾಂಕ್ ಖರ್ಗೆ ಅವರಿಗೆ ಮತ ಹಾಕಿದ್ದಾರೆ. ಅವರು ವ್ಯಥೆ ಪಡುತ್ತಿರಬಹುದು. ಮಂಜು, ದಿನೇಶ್ ಗುಂಡೂರಾವ್, ಪ್ರಿಯಾಂಕ್ ಖರ್ಗೆ, ಸಂತೋಷ್ ಲಾಡ್ ರಿಗೆ ಮತ ಹಾಕಿ ತಪ್ಪು ಮಾಡಿದ್ದೇವೆ ಎಂದು ವ್ಯಥೆ ಪಡುತ್ತಿರಬಹುದು ಎಂದು ವಿಶ್ಲೇಷಿಸಿದರು. ಇವರೆಲ್ಲರೂ ಪಾಕ್ ಏಜೆಂಟರಂತೆ ಮಾತನಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.
 
ದೇಶದ ಬೆಲೆ ಕೊಟ್ಟು, ಸೈನಿಕರನ್ನು ಬಲಿ ಕೊಟ್ಟು ಮಾತನಾಡದಿರಿ ಎಂದು ಎಚ್ಚರಿಸಿದರು. ರಾಜ್ಯದ ಈ ಮೇಲಿನ ಸಚಿವರು, ಕಾಂಗ್ರೆಸ್ ಪಕ್ಷಕ್ಕೆ ಪಾಕ್ ಭಯೋತ್ಪಾದನೆಗೆ ಬಲಿಯಾದ ಸೈನಿಕರ ಬಗ್ಗೆ ಕಳಕಳಿ ಇಲ್ಲವೇ? ಲಕ್ಷಾಂತರ ಜನ ಪಂಡಿತರು ಜಮ್ಮು- ಕಾಶ್ಮೀರದಿಂದ ಬೇರೆಡೆಗೆ ಸ್ಥಳಾಂತರ ಹೊಂದಿದ್ದಾರೆ. 4 ಲಕ್ಷ ಪಂಡಿತರು ಫುಟ್‍ಪಾತ್ ಮೇಲೆ ಬದುಕಿದ್ದು ಕೋಲಾರ ಶಾಸಕರಿಗೆ ಗೊತ್ತಿದೆಯೇ ಎಂದು ಪ್ರಶ್ನಿಸಿದರು.

ಈ ಥರದ ದಾಸ್ಯತೆ, ಮತಬ್ಯಾಂಕಿಗಾಗಿ ಇಂಥ ಸುಳ್ಳು ಹೇಳುವುದು, ಗುಲಾಮಿತನದ ಮಾತು ಇವರಿಗೆ ಶೋಭೆ ತರುವುದಿಲ್ಲ ಎಂದು ತಿಳಿಸಿದರು. ಮಲ್ಲಿಕಾರ್ಜುನ ಖರ್ಗೆಯವರೂ ಪ್ರಿಯಾಂಕ್ ಬಗ್ಗೆ ವ್ಯಥೆ ಪಡುತ್ತಿರಬಹುದು. ಅಥವಾ ದ್ವಿಮುಖ ನೀತಿಯೂ ಇರಬಹುದು ಎಂದು ಸಂಶಯ ವ್ಯಕ್ತಪಡಿಸಿದರು. ಮರಿ ಖರ್ಗೆ ಪಾಕ್ ಪರ ಮಾತನಾಡುವುದು, ಹಿರಿಯ ಖರ್ಗೆ ಸುಮ್ಮನಿರುತ್ತಾರೆ ಎಂದರಲ್ಲದೆ, ಮರಿ ಖರ್ಗೆಯವರೇ ನೀವು ದೇಶಕ್ಕೆ ಅಪಮಾನ ಮಾಡುತ್ತಿದ್ದೀರಿ ಎಂದು ಟೀಕಿಸಿದರು.
 
ಪಾಕಿಸ್ತಾನಕ್ಕೆ ಹೋಗಿ ಬರಲು ಸವಾಲು
ಭಯೋತ್ಪಾದನಾ ಚಟುವಟಿಕೆ ಮಾಹಿತಿ ನೀಡಲು ಭಾರತವು ವಿದೇಶಗಳಿಗೆ ನಿಯೋಗ ಕಳಿಸುತ್ತಿದೆ. ಅದೇ ಮಾದರಿಯಲ್ಲಿ ಪಾಕ್ ಭಯೋತ್ಪಾದನೆ ಕೇಂದ್ರಗಳ ನಾಶದ ಕುರಿತು ತಿಳಿದುಕೊಳ್ಳಲು ಅಲ್ಲಿಗೆ ಪ್ರಿಯಾಂಕ್ ಖರ್ಗೆ, ಸಂತೋಷ್ ಲಾಡ್, ಮಂಜುನಾಥ್ ಅವರು ಹೋಗಿ ಬರಲಿ ಎಂದು ಸವಾಲು ಹಾಕಿದರು.
ಸಂತೋಷ್ ಲಾಡ್ ಅವರಿಗೆ ಸಚಿವ ಸ್ಥಾನದಿಂದ ಕೈಬಿಡುವ ಭಯ ಇರಬೇಕು. ಅದಕ್ಕಾಗಿ ಅವರು ಪಾಕಿಸ್ತಾನದ ಪರ ಮಾತನಾಡುತ್ತಿದ್ದಾರೆ. ಇದೇ ಭಯದಿಂದ ಪ್ರಧಾನಿಯವರ  ಮತ್ತು ಸೇನೆಯ ವಿರುದ್ಧ ಮಾತನಾಡುತ್ತಿರುವಂತಿದೆ ಎಂದು ಸಂಶಯ ವ್ಯಕ್ತಪಡಿಸಿದರು. ಹೀಗೆ ಮಾತನಾಡಿದ್ದಕ್ಕೆ ನಿಮಗೆ ಪ್ರಶಸ್ತಿ ಸಿಗುವುದಿಲ್ಲ; ನಿಮ್ಮನ್ನು ಉಪ ಮುಖ್ಯಮಂತ್ರಿ ಮಾಡುವುದಿಲ್ಲ; ನಿಮ್ಮ ಕ್ಷೇತ್ರದಲ್ಲಿ ಜನರು ನಿಮ್ಮನ್ನು ಛೀ ಥೂ ಎನ್ನುತ್ತಿದ್ದಾರೆ ಎಂದು ಎಚ್ಚರಿಸಿದರು. 
 
ಯಾಕಾಗಿ ಸಾಧನಾ ಸಮಾವೇಶ..?
ರಾಜ್ಯದಲ್ಲಿ ಏನೇನೂ ಅಭಿವೃದ್ಧಿ ಇಲ್ಲ. ಏನು ಸಾಧನೆ ಮಾಡಿದ್ದೀರೆಂದು ಸಾಧನಾ ಸಮಾವೇಶ ಮಾಡುತ್ತೀರಿ? ವಿಧಾನಸೌಧದಲ್ಲಿ ಪಾಕಿಸ್ತಾನಕ್ಕೆ ಜಿಂದಾಬಾದ್ ಕೂಗಿದ್ದಕ್ಕೆ ಸಾಧನಾ ಸಮಾವೇಶವೇ? ಪಿಎಫ್‍ಐ, ಕೆಎಫ್‍ಡಿಯ 1600 ಜನರ ಕೇಸು ರದ್ದು ಮಾಡಿದ್ದಕ್ಕೆ ಸಮಾವೇಶವೇ? ಹುಬ್ಬಳ್ಳಿ, ಶಿವಮೊಗ್ಗದಲ್ಲಿ ಪೊಲೀಸರಿಗೆ ಅಪಮಾನಕ್ಕಾಗಿ ಸಮಾವೇಶವೇ? ಭಯೋತ್ಪಾದಕರು ಬೆಳೆಯಲು ಪೂರಕ ವಾತಾವರಣ ಸೃಷ್ಟಿಗಾಗಿ ಸಾಧನಾ ಸಮಾವೇಶವೇ? ಏನು ಸಾಧನೆ ಇದೆ? ಯಾವ ಶಾಸಕರಿಗೆ ಅಭಿವೃದ್ಧಿಗೆ 100 ಕೋಟಿ ಕೊಟ್ಟಿದ್ದೀರಿ ಎಂದು ರವಿಕುಮಾರ್ ಅವರು ಪ್ರಶ್ನೆಯನ್ನು ಮುಂದಿಟ್ಟರು.
 
 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ