ಇದು ಮೂರ್ಖತನದ ಪರಮಾವಧಿ: ರಾಜ್ಯ ಸರ್ಕಾರದ ವಿರುದ್ಧ ತೇಜಸ್ವಿ ಸೂರ್ಯ ಗರಂ

Sampriya

ಶನಿವಾರ, 17 ಮೇ 2025 (15:18 IST)
Photo Credit X
ಬೆಂಗಳೂರು: ಬೆಂಗಳೂರು ಮತ್ತು ತುಮಕೂರು ನಡುವೆ ಮೆಟ್ರೋ ರೈಲು ಸಂಪರ್ಕ ಯೋಜನೆ ಸಂಬಂಧ ಭಿನ್ನಾಭಿಪ್ರಾಯ ಹೊರಬಿದ್ದಿದೆ.

ಬೆಂಗಳೂರು ಹಾಗೂ ತುಮಕೂರು ಮಧ್ಯೆ ಮೆಟ್ರೋ ರೈಲು ಸಂಪರ್ಕ ಯೋಜನೆ ಸಂಬಂಧ ಖಾಸಗಿ ಕಂಪನಿ ಸಲ್ಲಿಸಿದ್ದ ಕಾರ್ಯಸಾಧ್ಯತಾ ಪರೀಕ್ಷಾ ವರದಿಯನ್ನು ಈಗಾಗಲೇ ಸರ್ಕಾರಕ್ಕೆ ಬಿಎಂಆರ್​ಸಿಎಲ್ ಸಲ್ಲಿಕೆ ಮಾಡಿದೆ. ಇದೀಗ ಈ ವಿಚಾರ ತಿಳಿದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಅಸಮಾಧಾನ ಹೊರಹಾಕಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ‘ತುಮಕೂರಿಗೆ ಮೆಟ್ರೋ ವಿಸ್ತರಣೆ ಮಾಡುವ ಕರ್ನಾಟಕ ಸರ್ಕಾರದ ನಿರ್ಧಾರ ಮೂರ್ಖತನದಿಂದ ಕೂಡಿದ್ದು. ಅದರ ಬದಲಾಗಿ ಬೆಂಗಳೂರಿನಲ್ಲಿ ಬಾಕಿ ಇರುವ ಮೆಟ್ರೋ ಮಾರ್ಗಗಳ ಕಾಮಗಾರಿಗಳನ್ನು ಬೇಗನೆ ಪೂರ್ಣಗೊಳಿಸುವ ಮತ್ತು ಬೆಂಗಳೂರಿನೊಳಗೆ ಮೆಟ್ರೋ ಜಾಲವನ್ನು ಮತ್ತಷ್ಟು ವಿಸತರಿಸುವತ್ತ ಗಮನಹರಿಸಬೇಕು ಎಂದು ಹೇಳಿದ್ದಾರೆ.

ಮೆಟ್ರೋ ಎಂಬುದು ನಗರದೊಳಗಿನ ಸಂಪರ್ಕವನ್ನು ಹೆಚ್ಚಿಸುವುದಕ್ಕೆ ಸಂಬಂಧಿಸಿದ್ದು. ತುಮಕೂರಿಗೆ ಆರ್​​ಆರ್​ಟಿಎಸ್ ಅಥವಾ ಉಪನಗರ ರೈಲು ಯೋಜನೆ (ಸಬ್ ಅರ್ಬನ್ ರೈಲ್) ಒದಗಿಸಬೇಕು ಎಂದು ತಿಳಿಸಿದ್ದಾರೆ.

ಬಿಜೆಪಿ ನಾಯಕ, ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ ರಾವ್ ಕೂಡ ಯೋಜನೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಮೆಟ್ರೋ ಎಂದರೇನು, ಸಬ್ ಅರ್ಬನ್, ಇಂಟರ್​ ಸಿಟಿ ಹಾಗೂ ದೀರ್ಘ ದೂರ ಕ್ರಮಿಸುವ ರೈಲುಗಳ ನಡುವಣ ವ್ಯತ್ಯಾಸ ಏನು ಎಂಬುದನ್ನು ಯಾರಾದರೂ ಈ ಸರ್ಕಾರಕ್ಕೆ ಅರ್ಥ ಮಾಡಿಸುವಿರಾ? ಈ ಬೇಡಿಕೆ ಇನ್ನು ಮುಂದೆ ವಿಜಯಪುರ, ಚಿತ್ತಾಪುರ, ಬೆಳಗಾವಿಗೂ ವಿಸ್ತರಿಸಬಹುದು’ ಎಂದು ಅವರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ