ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದರ ಮೇಲೆ ತೆರಿಗೆ ಹಾಕಿದರೆ, ಯಾವ ವಸ್ತುವಿನ ಬೆಲೆ ಏರಿಸಿದರೆ ಆದಾಯ ಬರುತ್ತದೆ ಎಂಬ ಹುಡುಕಾಟ ನಡೆಸಲಾಗುತ್ತಿದೆ. ಆ ಹಿನ್ನೆಲೆಯಲ್ಲಿ ಬೀದಿ ವ್ಯಾಪಾರಿಗಳ ಮೇಲೆ ಕೂಡ ವಾಣಿಜ್ಯ ತೆರಿಗೆ ಅಧಿಕಾರಿಗಳ ಕಚೇರಿಯಿಂದ ನೋಟಿಸ್ ಕೊಟ್ಟು ಹಣ ವಸೂಲಿಗೆ ಮುಂದಾಗಿದ್ದಾರೆ ಎಂದು ಆಕ್ಷೇಪಿಸಿದರು.
ಕಿರಾಣಿ, ಹಾಲು, ಟೀ ಕಾಫಿ ಮಾರಾಟಗಾರರು, ಹೂವು, ಹಣ್ಣು, ಮಾಂಸ ಮಾರಾಟ ಮಾಡುವವರು ತೆರಿಗೆಯೇತರ ವಸ್ತುಗಳನ್ನು ವಿಕ್ರಯಿಸುತ್ತಾರೆ. ಆ ತೆರಿಗೆ ಹೊರತಾದ ವಸ್ತುಗಳ ಮೇಲೆ ಕೂಡ ರಾಜ್ಯ ಸರಕಾರವು ವಾಣಿಜ್ಯ ತೆರಿಗೆ ಇಲಾಖೆ ಮೂಲಕ ತೆರಿಗೆ ವಿಧಿಸಿ, ನೋಟಿಸ್ ಕೊಟ್ಟು ಹಣ ವಸೂಲು ಮಾಡುತ್ತಿದೆ. ಆ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಿ; ಕೇಂದ್ರ ಸರಕಾರಕ್ಕೆ ಪತ್ರ ಬರೆಯುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.
ಸಣ್ಣ ವ್ಯಾಪಾರಿಗಳು ರಾಜ್ಯ ಸರಕಾರದ ತಪ್ಪು ನಿರ್ಧಾರದಿಂದ ನಗದುರಹಿತ ಡಿಜಿಟಲ್ ವ್ಯವಹಾರದ ಬದಲು ಹಣ ಪಡೆದೇ ವ್ಯವಹರಿಸಲು ಮುಂದಾಗಿದ್ದಾರೆ. ಸಣ್ಣ ವ್ಯಾಪಾರಸ್ಥರಿಗೆ ಈಗಲಾದರೂ ರಾಜ್ಯ ಸರಕಾರದ ತಪ್ಪಿನ ಅರಿವಾಗಿದೆ ಎಂದು ಭಾವಿಸುವುದಾಗಿ ಹೇಳಿದರು. ಸಣ್ಣ ವ್ಯಾಪಾರಿಗಳು ನಾಳೆ ಮತ್ತು ನಾಡಿದ್ದು ಹೋರಾಟ ಮಾಡಲಿದ್ದು, ಆ ಜಾಗಕ್ಕೆ ನಾವು ಹೋಗಲಿದ್ದೇವೆ. ಅವರ ಅಹವಾಲು ಸ್ವೀಕರಿಸಿ, ಅದನ್ನು ರಾಜ್ಯ ಸರಕಾರದ ಗಮನಕ್ಕೆ ತಂದು ಸರಿಪಡಿಸಲು ಮುಂದಾಗಲಿದ್ದೇವೆ ಎಂದು ಹೇಳಿದರು.