ವ್ಯಾಪಾರಿಗಳಿಗೆ ಲಕ್ಷ ಲಕ್ಷ ಜಿಎಸ್ ಟಿ ಕೇಂದ್ರವನ್ನು ದೂರಿದ ಸಿಎಂ, ಡಿಸಿಎಂ

Krishnaveni K

ಸೋಮವಾರ, 21 ಜುಲೈ 2025 (10:29 IST)
ಬೆಂಗಳೂರು: ವ್ಯಾಪಾರಿಗಳಿಗೆ ಲಕ್ಷ ಲಕ್ಷ ರೂ. ಜಿಎಸ್ ಟಿ ಕಟ್ಟಲು ನೋಟಿಸ್ ನೀಡುತ್ತಿರುವ ವಿಚಾರ ವಿವಾದಕ್ಕೆಡೆಮಾಡಿಕೊಟ್ಟಿದೆ. ಇದರ ಬೆನ್ನಲ್ಲೇ ಜಿಎಸ್ ಟಿ ವಿಚಾರವಾಗಿ ಸಿಎಂ, ಡಿಸಿಎಂ ಕೇಂದ್ರದ ಮೇಲೆ ಗೂಬೆ ಕೂರಿಸಿದ್ದಾರೆ.

ರಾಜ್ಯದ ಸಣ್ಣ ವ್ಯಾಪಾರಿಗಳಿಗೆ ಡಿಜಿಟಲ್ ಪೇಮೆಂಟ್ ನಿಂದ ತೆರಿಗೆ ನೋಟೀಸ್ ನೀಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಜಿಎಸ್‌ಟಿ ಪದ್ಧತಿ ಕೇಂದ್ರ ಸರ್ಕಾರ ಮಾಡಿದ್ದು, ಜಿಎಸ್‌ಟಿ ಕೌನ್ಸಿಲ್ ಕೇಂದ್ರ ಸರ್ಕಾರದ ಅಧೀನದಲ್ಲಿ ಬರುತ್ತದೆ. ಇದಕ್ಕೆ ರಾಜ್ಯ ಸರ್ಕಾರಗಳ ಜವಾಬ್ದಾರಿಯಿಲ್ಲ. ಆದಾಗ್ಯೂ ಈ ಬಗ್ಗೆ ಕೇಂದ್ರ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಿ, ರಾಜ್ಯ ಸರ್ಕಾರದ ವಾಣಿಜ್ಯ ತೆರಿಗೆ ಇಲಾಖೆಯೊಂದಿಗೆ ಚರ್ಚಿಸಿ, ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಇತ್ತ ಡಿಸಿಎಂ ಡಿಕೆ ಶಿವಕುಮಾರ್ ಕೂಡಾ ಕೇಂದ್ರದ ಮೇಲೆ ಬೆರಳು ತೋರಿಸಿದ್ದಾರೆ. ಜಿಎಸ್ ಟಿ ವಿಚಾರ ಕೇಂದ್ರ ಸರ್ಕಾರದ್ದು. ಜಿಎಸ್ ಟಿ ಎಂದು ಬೀದಿ ವ್ಯಾಪಾರಿಗಳಿಗೆ ಕೇಂದ್ರ ಸರ್ಕಾರ ಅನ್ಯಾಯ ಮಾಡಿದೆ.  40 ಲಕ್ಷ ಮೇಲೆ ವಹಿವಾಟು ಮಾಡುವವಿರಗೆ ಜಿಎಸ್ ಟಿ ನೋಟಿಸ್ ನೀಡಲಾಗಿದೆ. ಇದು ಕೇಂದ್ರ ಸರ್ಕಾರದ ಸಾಧನೆ ಎಂದು ವ್ಯಂಗ್ಯ ಮಾಡಿದ್ದಾರೆ.

ಬೀದಿ ವ್ಯಾಪಾರಿಗಳಿಗೆ ಲಕ್ಷ ಲಕ್ಷ ರೂ. ಟ್ಯಾಕ್ಸ್ ಕಟ್ಟಲು ನೋಟಿಸ್ ನೀಡಿರುವುದು ವಿವಾದಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಬಿಜೆಪಿ ರಾಜ್ಯ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದು, ವ್ಯಾಪಾರಿಗಳಿಗಾಗಿ ಸಹಾಯವಾಣಿಯನ್ನೂ ತೆರೆದಿದೆ. ಇತ್ತ ರಾಜ್ಯ ಸರ್ಕಾರ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ