ಖಾಸಗಿ ಶಾಲೆಗಳಲ್ಲಿ ನಾಡಗೀತೆ ಕಡ್ಡಾಯವಲ್ಲ: ರಾಜ್ಯ ಸರ್ಕಾರದ ಹೊಸ ವಿವಾದ

Krishnaveni K

ಬುಧವಾರ, 21 ಫೆಬ್ರವರಿ 2024 (13:20 IST)
ಬೆಂಗಳೂರು: ಮೊನ್ನೆಯಷ್ಟೇ ವಸತಿ ಶಾಲೆಯೊಂದರಲ್ಲಿ ಕುವೆಂಪು ಸಾಲುಗಳನ್ನು ತಿರುಚಿ ಬರೆದ ಕಾರಣಕ್ಕೆ ವಿವಾದಕ್ಕೀಡಾಗಿದ್ದ ರಾಜ್ಯ ಸರ್ಕಾರ ಇದೀಗ ಖಾಸಗಿ ಶಾಲೆಗಳಲ್ಲಿ ನಾಡಗೀತೆ ಕಡ್ಡಾಯವಲ್ಲ ಎಂಬ ಸುತ್ತೋಲೆ ಹೊರಡಿಸಿ ಮತ್ತೊಂದು ವಿವಾದಕ್ಕೆ ಸಿಲುಕಿದೆ.

ಖಾಸಗಿ ಶಾಲೆಗಳಿಗೆ ಇನ್ನು ಮುಂದೆ ನಾಡಗೀತೆ ಹಾಡುವುದು ಕಡ್ಡಾಯವಲ್ಲ ಎಂದು ಸುತ್ತೋಲೆ ಹೊರಡಿಸಲಾಗಿತ್ತು. ಇದು ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ವಿಚಾರ ಸುದ್ದಿಯಾಗುತ್ತಿದ್ದಂತೇ ಇದೀಗ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಸ್ಪಷ್ಟನೆ ನೀಡಿದ್ದಾರೆ.

ಇದು ಒಂದು ಸಣ್ಣ ಪ್ರಿಂಟ್ ಮಿಸ್ಟೇಕ್ ನಿಂದಾದ ಎಡವಟ್ಟು. ನಮಗೆ ಎಲ್ಲಾ ಶಾಲೆಗಳೂ ಒಂದೇ. ಆದೇಶ ಮಾಡಬೇಕಾದರೆ ಸರ್ಕಾರೀ ಅನುದಾನಿ ಶಾಲೆ ಎಂದು ಮಿಸ್ಟೇಕ್ ಆಗಿದೆ. ಎಲ್ಲಾ ಶಾಲೆಗಳು ಅಂತ ತಿದ್ದುಪಡಿ ಮಾಡುತ್ತೇವೆ.  ಸುತ್ತೋಲೆಯಲ್ಲಿ ಕೆಲವು ತಪ್ಪುಗಳಾಗಿವೆ. ಅವೆಲ್ಲವನ್ನೂ ತಿದ್ದಿಕೊಳ್ಳುತ್ತೇವೆ ಎಂದು ಸಚಿವರು ಸ್ಪಷ್ಟನೆ ನೀಡಿದ್ದಾರೆ.

ಜ್ಞಾನಪೀಠ ಪುರಸ್ಕೃತ ಕವಿ ಕುವೆಂಪು ಅವರ ಜೈ ಭಾರತ ಜನನಿಯ ತನುಜಾತೆ ಹಾಡನ್ನು ನಾಡಗೀತೆಯಾಗಿ ಘೋಷಿಸುವ ಕುರಿತು ಹೊರಡಿಸಲಾದ ಸರ್ಕಾರದ ಆದೇಶ ಮತ್ತು ಅದರಲ್ಲಿ ಮಾಡಲಾಗಿರುವ ತಿದ್ದುಪಡಿ ಪ್ರಕಾರ ಎಲ್ಲಾ ಶಾಲೆಗಳಲ್ಲಿ ಯಾವುದೇ ಕಾರ್ಯಕ್ರಮ ಆರಂಭವಾಗುವ ಮೊದಲು ನಾಡಗೀತೆಯನ್ನು ಹಾಡುವುದು ಎಂದು ಸುತ್ತೋಲೆಯಲ್ಲಿ ಬರೆಯಬೇಕಾಗಿತ್ತು. ಎಲ್ಲಾ ಶಾಲೆಗಳಲ್ಲಿ ಎನ್ನುವ ಬದಲು ಸರ್ಕಾರಿ ಶಾಲೆಗಳು, ಅನುದಾನಿತ ಶಾಲೆಗಳು ಎಂದು ಬರೆಯಲಾಗಿದೆ. ಈ ಮೂಲಕ ಖಾಸಗಿ ಶಾಲೆಗಳಲ್ಲಿ ಕಡ್ಡಾಯವಲ್ಲ ಎಂದು ಅರ್ಥ ಕೊಡುತ್ತಿದೆ. ಹೀಗಾಗಿ ಈ ಸುತ್ತೋಲೆ ವಿವಾದಕ್ಕೆ ಕಾರಣವಾಗಿತ್ತು. ಇದು ತಪ್ಪಾಗಿದೆ. ಸರಿಪಡಿಸುತ್ತೇವೆ ಎಂದು ಸಚಿವರು ಈಗ ಸ್ಪಷ್ಟನೆ ಕೊಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ