ನಿಮ್ಮ ಮೆಟ್ರೊ ನೀವೇ ಇಟ್ಕೊಳ್ಳಿ, ನಾವು ಬೈಕ್, ಸೈಕಲ್ ಹತ್ಕೊಂಡು ಹೋಗ್ತೀವಿ

Krishnaveni K

ಭಾನುವಾರ, 9 ಫೆಬ್ರವರಿ 2025 (12:01 IST)
ಬೆಂಗಳೂರು: ನಮ್ಮ ಮೆಟ್ರೊ ಪ್ರಯಾಣ ದರವನ್ನು ಏರಿಕೆ ಮಾಡಿರುವುದರ ಬಗ್ಗೆ ಸಾರ್ವಜನಿಕರು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕಿದ್ದಾರೆ. ನಿಮ್ಮ ಮೆಟ್ರೊ ನೀವೇ ಇಟ್ಕೊಳ್ಳಿ ನಾವು ಬೈಕ್, ಸೈಕಲ್ ಹತ್ಕೊಂಡು ಹೋಗ್ತೀವಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದಿನಿಂದ ಜಾರಿಯಾಗುವಂತೆ ಮೆಟ್ರೊ ಪ್ರಯಾಣ ದರವನ್ನು ಕಿ.ಮೀ. ಅಂತರಕ್ಕೆ ತಕ್ಕಂತೆ ಏರಿಕೆ ಮಾಡಲಾಗಿದೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇತ್ತೀಚೆಗಷ್ಟೇ ರಾಜ್ಯ ರಸ್ತೆ ಸಾರಿಗೆಗಳ ಎಲ್ಲಾ ಬಸ್ ಗಳ ಟಿಕೆಟ್ ದರ ಹೆಚ್ಚಳ ಮಾಡಲಾಗಿತ್ತು. ಇದೀಗ ಮೆಟ್ರೊ ದರವನ್ನೂ ಏರಿಕೆ ಮಾಡಿರುವುದು ದುಡಿಯುವ ವರ್ಗದವರ ಆಕ್ರೋಶಕ್ಕೆ ಕಾರಣವಾಗಿದೆ.

ಬೆಂಗಳೂರಿನಲ್ಲಿ ಎಷ್ಟೋ ಐಟಿ-ಬಿಟಿ ನೌಕರರು, ಇತರೆ ಕಂಪನಿಗಳ ನೌಕರರು ಪ್ರತಿನಿತ್ಯ ಕಚೇರಿಗೆ ತೆರಳಲು ಮೆಟ್ರೊ ರೈಲುಗಳನ್ನು ಆಶ್ರಯಿಸಿದ್ದಾರೆ. ಟ್ರಾಫಿಕ್ ಗೊಂದಲಗಳಿಲ್ಲದೇ ನಿಗದಿತ ಸಮಯಕ್ಕೆ ಕಚೇರಿಗೆ ತೆರಳಲು ಇದು ಸಹಾಯವಾಗುತ್ತಿತ್ತು.

ಆದರೆ ಈಗ ಮೆಟ್ರೊ ಪ್ರಯಾಣ ದರವನ್ನು ವಿಪರೀತ ಏರಿಕೆ ಮಾಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ನಮ್ಮ ಬೈಕ್ ಕೂಡಾ ಪ್ರತೀ ಲೀಟರ್ ಗೆ 25-30 ಕಿ.ಮೀ. ಮೈಲೇಜ್ ಕೊಡುತ್ತದೆ. ಹಾಗಿರುವಾಗ ನಮಗೆ ಮೆಟ್ರೊ ಯಾಕೆ ಬೇಕು, ನಾವು ಬೈಕಲ್ಲೋ ಸೈಕಲ್ ನಲ್ಲೋ ಹೋಗ್ತೀವಿ ಬಿಡಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕಿದ್ದಾರೆ.  ಮೆಟ್ರೊ ಪ್ರಯಾಣ ದರ ಏರಿಕೆ ಮಾಡಿರುವುದು ಎಷ್ಟು ಹೆಚ್ಚುವರಿ ಹೊರೆ ಬೀಳುತ್ತಿದೆ ಎಂಬುದನ್ನು ಹಲವರು ವಿವರವಾಗಿ ಬರೆದುಕೊಂಡಿದ್ದಾರೆ. ಇದೀಗ ಇದಕ್ಕೆ ಬಿಎಂಆರ್ ಸಿಎಲ್ ಮತ್ತು ಆಡಳಿತದ ಚುಕ್ಕಾಣಿ ಹಿಡಿದವರು ಸ್ಪಂದಿಸುತ್ತಾರಾ ನೋಡಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ