ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಗ್ಗು ಪ್ರದೇಶದಲ್ಲಿ ಮಳೆಯ ಅವಾಂತರವನ್ನು ತಡೆಯಲು ಮತ್ತು ಪರಿಹಾರಕ್ಕಾಗಿ ತಂಡಗಳನ್ನು ಹೆಚ್ಚಿಸಲು ಸೂಚನೆ ನೀಡಲಾಗಿದೆ. ಎನ್‌ಡಿಆರ್‌ಎಫ್ ತಂಡಗಳನ್ನು ಬಳಸಿಕೊಳ್ಳುವುದಕ್ಕೆ ಸೂಚಿಸಲಾಗಿದೆ ಎಂದು ಹೇಳಿದರು.
ಅಧಿಕಾರಿಗಳ ಸಭೆ ನಡೆಸಿ ಮಳೆನಿಂತ ತಕ್ಷಣ ಬೆಂಗಳೂರಿನ ರಸ್ತೆಗಳ ಸಮಗ್ರ ರಿಪೇರಿಗೆ ಸೂಚಿಸಲಾಗಿದೆ. ರಸ್ತೆಗಳ ನಿರ್ವಹಣಾ ಗುತ್ತಿಗೆದಾರರು ರಿಪೇರಿ ಮಾಡದೇ ಇದ್ದರೆ, ಗುತ್ತಿಗೆದಾರರ ಪಾವತಿಯನ್ನು ತಡೆಹಿಡಿದು ಬಿಬಿಎಂಪಿಯೇ ರಿಪೇರಿ ಮಾಡಲು ನಿರ್ದೇಶನ ನೀಡಲಾಗಿದೆ. ಅಲ್ಲದೇ 110 ಹಳ್ಳಿಗಳಲ್ಲಿ ಒಳಚರಂಡಿ ಜಾಲಕ್ಕೆ ತೊಂದರೆಯಾಗಿದೆ. ಇದಕ್ಕೆ 280 ಕೋಟಿ ರೂ. ಬಿಡುಗಡೆ ಮಾಡಿ, ಕಾಮಗಾರಿ ನಡೆಸಲು ಅನುಮತಿಸಲಾಗಿದೆ ಎಂದು ವಿವರಿಸಿದರು.
ಅನಿರೀಕ್ಷಿತ ಮಳೆಯಿಂದಾಗಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಕೃಷಿ ಇಲಾಖೆಯಿಂದ ಬೆಳೆ ಹಾನಿ ಸಮೀಕ್ಷೆಯನ್ನೂ ಮಾಡಲಾಗುತ್ತಿದೆ. ತೋಟಗಾರಿಕಾ ಇಲಾಖೆಯು ಹಣ್ಣು ಹಂಪಲು, ತರಕಾರಿಗಳ ನಷ್ಟದ ಕುರಿತು ನಿಗಾ ವಹಿಸುತ್ತದೆ. ನಷ್ಟ ಪರಿಹಾರ ವಿತರಣೆಗೆ ಕ್ರಮಕೈಗೊಳ್ಳುತ್ತೇವೆ. ಬೆಳೆಗಳ ಕನಿಷ್ಠ ಬೆಂಬಲಬೆಲೆ ಖರೀದಿ ಸಂಬಂಧ ಇಂದು ಮಹತ್ವದ ಸಭೆಯೊಂದನ್ನು ಕರೆಯಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.