ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಕಾರ್ಪೋರೇಟರ್ ಪುತ್ರಿ ನೇಹಾ ಕೊಲೆ ಪ್ರಕರಣದ ಒಂದೊಂದೇ ಸತ್ಯಗಳು ಈಗ ಬೆಳಕಿಗೆ ಬರುತ್ತಿವೆ. ಇದೀಗ ಹಂತಕ ಫಯಾಜ್ ಜೈಲು ಅಧಿಕಾರಿಗಳ ಮುಂದೆ ತಾನು ಆಕೆಯನ್ನು ಹತ್ಯೆ ಮಾಡಿದ್ದೇಕೆ ಎಂದು ಬಾಯ್ಬಿಟ್ಟಿದ್ದಾನೆ.
ಘಟನೆ ನಡೆದ ಸ್ಥಳದಲ್ಲೇ ಫಯಾಜ್ ನನ್ನು ಹಿಡಿದು ಬಂಧಿಸಲಾಗಿತ್ತು. ಕೋರ್ಟ್ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಇದೀಗ ಫಯಾಜ್ ಜೈಲು ಕಂಬಿ ಎಣಿಸುತ್ತಿದ್ದಾನೆ. ಈ ನಡುವೆ ಆತ ತಾನು ಆಕೆಯನ್ನು ಹತ್ಯೆ ಮಾಡಿದ್ದೇಕೆ ಎಂದು ಕಾರಣ ವಿವರಿಸಿದ್ದಾನೆ.
ಅವಳು ನನ್ನ ಜೊತೆ ಮಾತು ಬಿಟ್ಟಿದ್ದಕ್ಕೇ ಹೀಗೆ ಮಾಡಿದೆ ಎಂದಿದ್ದಾನೆ. ನಾನು ಮೊದಲೇ ಕಾಲೇಜು ಬಿಟ್ಟಿದ್ದೆ. ಅವಳನ್ನು ಕೊಲೆ ಮಾಡುವ ಒಂದು ವಾರದ ಮೊದಲು ಮಾತನಾಡಲು ಪ್ರಯತ್ನಿಸಿದ್ದೆ. ಆಗ ಅವಳು ನನ್ನನ್ನು ಅವಾಯ್ಡ್ ಮಾಡಿದಳು. ಆವತ್ತು ಏಪ್ರಿಲ್ 18 ರಂದು ಅವಳು ಪರೀಕ್ಷೆ ಬರೆಯಲು ಕಾಲೇಜಿಗೆ ಬಂದಿದ್ದಳು. ನಾನು ಅಂದು ಮತ್ತೆ ಅವಳನ್ನು ಮಾತನಾಡಿಸಲು ಪ್ರಯತ್ನಿಸಿದೆ. ಪರೀಕ್ಷೆ ಮುಗಿಯುವವರೆಗೂ ಕಾದೆ. ಬಳಿಕ ಅವಳನ್ನು ಮಾತನಾಡಿಸಲು ಬಂದಾಗ ನನಗೆ ಮಾತನಾಡಲು ಇಷ್ಟವಿಲ್ಲ ಎಂದು ಹೊರಡಲು ನೋಡಿದಳು. ಆಗ ಅವಳಿಗೆ ಚಾಕು ಹಾಕಿದೆ. ಹತ್ತು ಬಾರಿ ಚುಚ್ಚಿದೆ. ಆಗ ನನ್ನ ಕೈಗೆ, ಕಾಲಿಗೂ ಗಾಯವಾಗಿತ್ತು. ಅವಳು ಮಾತನಾಡಲ್ಲ ಎಂದಿದ್ದಕ್ಕೆ ಚೂರಿ ಹಾಕಿದೆ ಎಂದಿದ್ದಾನೆ.
ನೇಹಾ ಕುಟುಂಬಸ್ಥರೂ ನಿನ್ನೆ ಫಯಾಜ್ ಬಹಳ ದಿನಗಳಿಂದ ಪ್ರೀತಿಸುವಂತೆ ಕಾಟ ಕೊಡುತ್ತಿದ್ದ. ಆದರೆ ನಾವು ಆತನಿಗೆ ಮದುವೆ ಮಾಡಿಕೊಡಲು ಒಪ್ಪಿರಲಿಲ್ಲ. ಈ ಬಗ್ಗೆ ಅವರ ಮನೆಯವರ ಮೂಲಕವೂ ಎಚ್ಚರಿಕೆ ನೀಡಿದ್ದೆವು ಎಂದಿದ್ದರು.