ಹುಬ್ಬಳ್ಳಿ: ಒಂದೆಡೆ ಹೆತ್ತ ಮಗಳು ಪಾಪಿ ಫಯಾಜ್ ಕೈಯಲ್ಲಿ ಜೀವ ಕಳೆದುಕೊಂಡ ಸಂಕಟ. ಇನ್ನೊಂದೆಡೆ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವ ಆಕೆಯ ಫೋಟೋಗಳು. ನೇಹಾ ಕುಟುಂಬಸ್ಥರಿಗೆ ಇದೆಲ್ಲಾ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಹುಬ್ಬಳ್ಳಿಯ ಕಾರ್ಪೋರೇಟರ್ ನಿರಂಜನ್ ಹೀರೇಮಠ್ ಮಗಳು ನೇಹಾ ಹೀರೇಮಠ್ ತಾನು ಓದುತ್ತಿದ್ದ ಕಾಲೇಜಿನಲ್ಲೇ ಫಯಾಜ್ ಎಂಬಾತ ಚಾಕುವಿನಿಂದ ಇರಿದ ಪರಿಣಾಮ ಸಾವಿಗೀಡಾಗಿದ್ದಳು. ಆಕೆಯ ಸಾವಿನ ಬಗ್ಗೆ ರಾಜ್ಯದಾದ್ಯಂತ ಭಾರೀ ಆಕ್ರೋಶವಿದೆ. ತನ್ನನ್ನು ಮದುವೆಯಾಗಲು ಒಪ್ಪಲಿಲ್ಲವೆಂದು ನೇಹಾಳನ್ನು ಹತ್ಯೆ ಮಾಡಿದ ಫಯಾಜ್ ನನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕು ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಆದರೆ ಈ ನಡುವೆ ಕೆಲವು ಮಾಧ್ಯಮಗಳು, ಸೋಷಿಯಲ್ ಮೀಡಿಯಾಗಳಲ್ಲಿ ಆಕೆ ಮತ್ತು ಫಯಾಜ್ ಜೊತೆಗಿರುವ ಫೋಟೋಗಳು ಹರಿದಾಡಿವೆ. ನೇಹಾ ಕೂಡಾ ಆತನನ್ನು ಮೊದಲು ಪ್ರೀತಿಸುತ್ತಿದ್ದಳು, ನಂತರ ದೂರವಾಗಿದ್ದಳು ಎಂದು ವರದಿಯಾಗುತ್ತಿದೆ. ಇದು ನೇಹಾ ಕುಟುಂಬಸ್ಥರಿಗೆ ಮತ್ತಷ್ಟು ಬೇಸರ ತಂದಿದೆ.
ಆಕೆ ಯಾವತ್ತೂ ಆತನನ್ನು ಪ್ರೀತಿಸುತ್ತಿರಲಿಲ್ಲ. ನೇಹಾ ಏನೇ ಇದ್ದರೂ ನಮ್ಮ ಬಳಿ ಹೇಳುತ್ತಿದ್ದಳು. ಫಯಾಜ್ ಪೀಡಿಸುತ್ತಿದ್ದ ವಿಚಾರವನ್ನೂ ಹೇಳಿದ್ದಳು. ನಾವು ಅವನಿಗೆ ಎಚ್ಚರಿಕೆಯನ್ನೂ ಕೊಟ್ಟಿದ್ದೆವು ಎಂದು ನೇಹಾ ತಂದೆ ಹೇಳಿದ್ದಾರೆ. ಇತ್ತ ನೇಹಾ ತಾಯಿ, ನನ್ನ ಮಗಳು ಆತನೊಂದಿಗೆ ಇರಲೇ ಇಲ್ಲ. ಆ ಫೋಟೋಗಳೆಲ್ಲಾ ಯಾರೋ ಬೇಕೆಂದೇ ಎಡಿಟ್ ಮಾಡಿ ಹಾಕುತ್ತಿದ್ದಾರೆ. ಈಗೆಲ್ಲಾ ಟೆಕ್ನಾಲಜಿಯಲ್ಲಿ ಯಾರು ಯಾರೋ ಜೊತೆಗಿರುವಂತೆ ಮಾಡಬಹುದಲ್ವಾ? ಅದೇ ರೀತಿ ಮಾಡಿದ್ದಾರಷ್ಟೇ. ನಮ್ಮ ಮಗಳು ಅಂತಾಕಿ ಅಲ್ಲ ಎಂದಿದ್ದರು.
ಆ ಫೋಟೋಗಳು ನಕಲಿಯೋ, ಅಸಲಿಯೋ ಏನೇ ಇರಲಿ, ಆದರೆ ಇಂದು ಆಕೆ ಧಾರುಣವಾಗಿ ಸಾವನ್ನಪ್ಪಿದ್ದ ಪರಿಸ್ಥಿತಿಯಲ್ಲಿ ಕೆಲವರು ಪ್ರಬುದ್ಧತೆ ಮರೆತು ಅಂತಹ ಫೋಟೋಗಳನ್ನು ಪ್ರಕಟಿಸುವ ಮೂಲಕ ಆಕೆಯ ಕುಟುಂಬಕ್ಕೆ ಮತ್ತಷ್ಟು ನೋವು ಕೊಡುತ್ತಿರುವುದಂತೂ ಸತ್ಯ.