ನೆಲಮಂಗಲ ಸರಣಿ ಅಪಘಾತ: 120ಕ್ಕೂ ಹೆಚ್ಚು ಮಂದಿಗೆ ಉದ್ಯೋಗದಾತರಾಗಿದ್ದ ಚಂದ್ರಮ್‌ ಕುಟುಂಬ

Sampriya

ಭಾನುವಾರ, 22 ಡಿಸೆಂಬರ್ 2024 (10:41 IST)
Photo Courtesy X
ಬೆಂಗಳೂರು: ಶನಿವಾರ ನೆಲಮಂಗಲ ಬಳಿ ನಡೆದ ಭೀಕರ ಅಪಘಾತದಲ್ಲಿ ಮೃತಪಟ್ಟ ಯುವ ಉದ್ಯಮಿ ಚಂದ್ರಮ್‌ ಅವರು ಮಹಾರಾಷ್ಟ್ರದ ಜತ್ತ ತಾಲ್ಲೂಕಿನ ಕುಗ್ರಾಮವೊಂದರಲ್ಲಿ ಹುಟ್ಟಿ ಸಾಫ್ಟ್‌ವೇರ್‌ ಉದ್ಯಮದಲ್ಲಿ ಯಶಸ್ವಿಯಾಗಿ ಹೆಜ್ಜೆ ಇಡುತ್ತಿದ್ದರು.

ಚಂದ್ರಮ್‌ ಏಗಪ್ಪಗೋಳ ಅವರು ಮಂಗಳೂರು ಸುರತ್ಕಲ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ  (ಎನ್‌ಐಟಿಕೆ) ಎಲೆಕ್ಟ್ರಿಕಲ್‌ ಆ್ಯಂಡ್‌ ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದುಕೊಂಡಿದ್ದರು. ಕೆಲವು ವರ್ಷ ವಿದೇಶದಲ್ಲೂ ಕೆಲಸ ಮಾಡಿದ್ದರು.

2015ರ ಸುಮಾರಿಗೆ ನಗರಕ್ಕೆ ಬಂದಿದ್ದ ಅವರು, ಸಾಫ್ಟ್‌ವೇರ್‌ ಎಂಜಿನಿಯರ್ ಆಗಿ ಕೆಲಸ ಮಾಡಿದ್ದರು. ನಂತರ, 2018ರಲ್ಲಿ ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ಪಾಲುದಾರಿಕೆಯಲ್ಲಿ ಐಎಎಸ್‌ಟಿ ಸಾಫ್ಟ್‌ವೇರ್‌ ಸಲ್ಯೂಷನ್‌ ಸಂಸ್ಥೆ ಆರಂಭಿಸಿದ್ದರು. ಕಂಪನಿಯಲ್ಲಿ 120ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದಾರೆ. ಸಾಫ್ಟ್‌ವೇರ್‌ ಪ್ರೋಗ್ರಾಮಿಂಗ್‌ ಕೆಲಸಗಳನ್ನು ಈ ಕಂಪನಿಯಲ್ಲಿ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಬೆಳ್ಳಂದೂರಿನ ಸ್ವಂತ ಮನೆಯಲ್ಲಿ ಚಂದ್ರಮ್ ಅವರು ನೆಲಸಿದ್ದರು. ಮಹಾರಾಷ್ಟ್ರದ ಜತ್ತ ತಾಲ್ಲೂಕಿನ ಮೊರಬಗಿ ಗ್ರಾಮದಲ್ಲಿ ವಯಸ್ಸಾದ ತಂದೆ ಹಾಗೂ ತಾಯಿ ಇದ್ದರು. ಕೆಲವು ದಿನಗಳಿಂದ ತಂದೆ ಅನಾರೋಗ್ಯದಿಂದ ಬಳಲುತ್ತಿದ್ದರು. ಮಕ್ಕಳಿಗೂ ಕ್ರಿಸ್‌ಮಸ್ ರಜೆಯಿದ್ದ ಕಾರಣಕ್ಕೆ ಪೋಷಕರನ್ನು ನೋಡಲು ಕುಟುಂಬಸ್ಥರ ಜತೆಗೆ ಮಹಾರಾಷ್ಟ್ರಕ್ಕೆ ತೆರಳುತ್ತಿದ್ದರು.

ಎರಡು ತಿಂಗಳ ಹಿಂದೆ ₹1 ಕೋಟಿ ಮೊತ್ತ ನೀಡಿ ಖರೀದಿಸಿದ್ದ ಕಾರಿನಲ್ಲಿ ಹೊರಟಿದ್ದ ಅವರು, ಹೆದ್ದಾರಿಯಲ್ಲಿ ಯಮಸ್ವರೂಪಿಯಾಗಿ ಬಂದ ಕಂಟೇನರ್‌ ಚಂದ್ರಮ್ ಸೇರಿದಂತೆ ಅವರ ಕುಟುಂಬದ ಆರು ಮಂದಿಯ ಜೀವ ತೆಗೆದಿದೆ.

ಚಂದ್ರಮ್‌ ಏಗಪ್ಪಗೋಳ ಅವರ ಸಹೋದರ ಮಲ್ಲಿಕಾರ್ಜುನ ಏಗಪ್ಪಗೋಳ ವೈದ್ಯರಾಗಿದ್ದು, ಅವರೂ ಬೆಂಗಳೂರಿನಲ್ಲೇ ಕೆಲಸ ಮಾಡುತ್ತಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ