ಎನ್ಇಪಿ ಅನುಷ್ಠಾನದ ಕುರಿತು ಪ್ರತಿಪಕ್ಷದವರು ಟೀಕೆ ಮಾಡುತ್ತಿದ್ದಾರೆ. ಯಾವುದೇ ಚರ್ಚೆಯನ್ನು ನಡೆಸಿಲ್ಲ ಎಂದು ದೂರುತ್ತಿದ್ದಾರೆ. ಆದರೆ, ಶಿಕ್ಷಣ ತಜ್ಞರು, ಶಿಕ್ಷಕ ಸಮುದಾಯ, ಪಾಲಕರು, ಪೋಷಕರು, ಮಕ್ಕಳು, ತರಬೇತಿ ಸಂಸ್ಥೆಗಳು, ಸಂಶೋಧನಾ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳ ಪ್ರಮುಖರು, ಶಿಕ್ಷಣ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ತೊಡಗಿಸಿಕೊಂಡವರು ಸೇರಿದಂತೆ ಕ್ಷೇತ್ರದ ಸಾವಿರಾರು ಜನರ ಜೊತೆ ಚರ್ಚಿಸಿ ಇಸ್ರೋ ಮಾಜಿ ಅಧ್ಯಕ್ಷ, ವಿಜ್ಞಾನಿ ಕಸ್ತೂರಿ ರಂಗನ್ ಅವರ ಅಧ್ಯಕ್ಷತೆಯ ಸಮಿತಿ ಎನ್ಇಪಿ ಸಿದ್ದಪಡಿಸಿದೆ ಎಂದು ಸಚಿವ ನಾಗೇಶ್ ನುಡಿದರು.
ಎನ್ಇಪಿ ಕುರಿತು ಸಾರ್ವಜನಿಕರಿಂದ ಸಲಹೆ ಸೂಚನೆ ನೀಡಲು ಕೋರಲಾಗಿತ್ತು. ದೇಶದ ಎಲ್ಲ ಭಾಗಗಳಿಂದ ದೊಡ್ಡ ಸಂಖ್ಯೆಯಲ್ಲಿ ಸಲಹೆಗಳು ಬಂದಿವೆ. ಅವುಗಳನ್ನು ಪರಿಶೀಲಿಸಲಾಗಿದೆ. ಆದರೆ, ಚರ್ಚೆಗೆ ಅವಕಾಶ ನೀಡದೆ ಏಕಾಏಕಿ ಎನ್ಇಪಿ ಅನುಷ್ಠಾನಗೊಳಿಸಲಾಗುತ್ತಿದೆ ಎಂಬ ಪ್ರತಿಪಕ್ಷದವರ ಮಾತುಗಳು ಸತ್ಯಕ್ಕೆ ದೂರವಾಗಿವೆ ಎಂದು ಸಚಿವ ನಾಗೇಶ್ ಹೇಳಿದರು.
ಭವಿಷ್ಯದ ಪ್ರಜೆಗಳನ್ನು ರೂಪಿಸುವ ಶಿಕ್ಷಕರಿಗೆ ಸನ್ಮಾನ ಮಾಡುವುದು ಶ್ಲಾಘನೀಯ ಸಂಗತಿ. ಉತ್ತಮ ಶಿಕ್ಷಕರಿಗೆ ಸನ್ಮಾನ ಮಾಡುವುದರಿಂದ ಅವರ ಜವಾಬ್ದಾರಿ ಹೆಚ್ಚುತ್ತದೆ. ಇನ್ನಷ್ಟು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಾರೆ. ಅದೇ ರೀತಿ ಬೇರೆ ಶಿಕ್ಷಕರು ಕೂಡ ಇನ್ನಷ್ಟು ಉತ್ತಮವಾಗಿ ಕೆಲಸ ಮಾಡಿ ಪ್ರಶಸ್ತಿ ಪಡೆಯಲು ಪ್ರಯತ್ನಿಸುತ್ತಾರೆ. ಅಂತಿಮವಾಗಿ ಮಕ್ಕಳು, ಶಿಕ್ಷಣ ಕ್ಷೇತ್ರಕ್ಕೆ ಒಳಿತಾಗುತ್ತದೆ ಎಂದು ಸಚಿವರು ಹೇಳಿದರು.
ಇದೇ ವೇಳೆ 38 ಅತ್ಯುತ್ತಮ ಶಿಕ್ಷಕರಿಗೆ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರ್ ಎಸ್. ಸಾಹುಕಾರ್, ರುಪ್ಸ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ, ರೂಪ್ಸ ಗೌರವಾಧ್ಯಕ್ಷ ಸಿ.ಎನ್ ಭಂಡಾರೆ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.