ಸಿಗಂದೂರು ಸೇತುವೆ ಉದ್ಘಾಟನೆಗೆ ಆಹ್ವಾನ ಸಿಕ್ಕಿಲ್ಲ ಎಂದ ಸಿಎಂ ಸಿದ್ದರಾಮಯ್ಯ ನೆಟ್ಟಿಗರ ಪ್ರಶ್ನೆ

Krishnaveni K

ಸೋಮವಾರ, 14 ಜುಲೈ 2025 (16:53 IST)
ಬೆಂಗಳೂರು: ಸಿಗಂದೂರಿನಲ್ಲಿ ಇಂದು ಸೇತುವೆ ಉದ್ಘಾಟನೆ ಕಾರ್ಯಕ್ರಮಕ್ಕೆ ನನಗೆ ತಡವಾಗಿ ಆಹ್ವಾನ ನೀಡಲಾಯಿತು ಎಂದು ತಗಾದೆ ತೆಗೆದಿರುವ ಸಿಎಂ ಸಿದ್ದರಾಮಯ್ಯ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ನೂರೆಂಟು ಪ್ರಶ್ನೆ ಮಾಡಿದ್ದಾರೆ.

ಸೇತುವೆ ಉದ್ಘಾಟನೆಗೆ ನನಗೆ ಮೊದಲೇ ಹೇಳಿಲ್ಲ. ಕೊನೆಯ ಕ್ಷಣದಲ್ಲಿ ಆಹ್ವಾನ ನೀಡಲಾಯಿತು ಎಂಬುದು ಸಿಎಂ ಸಿದ್ದರಾಮಯ್ಯ ಅವರ ಆರೋಪವಾಗಿದೆ. ಇದೇ ವಿಚಾರವಾಗಿ ಈಗ ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಸಿದ್ದರಾಮಯ್ಯ ನಡುವೆ ಟ್ವೀಟ್ ವಾರ್ ಕೂಡಾ ನಡೆದಿದೆ.

ಇದಕ್ಕೆ ಈಗ ನೆಟ್ಟಿಗರು ಸಾಕಷ್ಟು ಸಂಖ್ಯೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.  ಈ ಹಿಂದೆ ಐಪಿಎಲ್ ಸಂಭ್ರಮಾಚರಣೆಗೆ ಕೊನೆಯ ಕ್ಷಣದಲ್ಲಿ ಆಹ್ವಾನವಿತ್ತರೂ ಹೋಗಿದ್ದಿರಿ. ಈಗ ಸೇತುವೆ ಉದ್ಘಾಟನೆ ಕಾರ್ಯಕ್ರಮಕ್ಕೆ ಮಾತ್ರ ನಿಮಗೆ ಕೊನೆಯ ಕ್ಷಣದಲ್ಲಿ ಆಹ್ವಾನ ನೀಡಿದರೆ ಅದು ಕೊರತೆಯಾಗುತ್ತದೆಯೇ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.

ಮತ್ತೆ ಕೆಲವರು ಎಲ್ಲವೂ ಆದ್ಯತೆಗೆ ಅನುಗುಣವಾಗಿರುತ್ತದೆ. ನಿಜವಾಗಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕೆಂದಿದ್ದರೆ ಇಂದಿನ ಪೂರ್ವ ನಿಗದಿತ ಕಾರ್ಯಕ್ರಮಕ್ಕೆ ಹೋಗುವ ಮೊದಲು ಒಂದು ಕ್ಷಣ ಬಂದು ಹೋಗಬಹುದಿತ್ತಲ್ಲವೇ? ಅದಕ್ಕಾಗಿ ಇಷ್ಟು ರಾಜಕೀಯ ಆರೋಪ-ಪ್ರತ್ಯಾರೋಪಗಳು ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ.

ಸಿಗಂದೂರು ಸೇತುವೆ ಎನ್ನುವುದು ಅಲ್ಲಿನ ಸ್ಥಳೀಯರ ಕನಸು. ಎಷ್ಟೋ ವರ್ಷಗಳ ಸಂಕಷ್ಟಕ್ಕೆ ಸಿಗುತ್ತಿರುವ ಪರಿಹಾರ. ಅಲ್ಲಿನವರು ಅದ್ಧೂರಿ ಉದ್ಘಾಟನೆ ಬಯಸಲಿಲ್ಲ. ಅವರಿಗೆ ತಮ್ಮ ಸಂಪರ್ಕಕ್ಕೆ ಬೇಗನೇ ಒಂದು ಸೇತುವೆಯಾದರೆ ಸಾಕಿತ್ತು ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ