ರೈತರಿಗಿಗ ಹೊಸದೊಂದು ಸಂಕಷ್ಟ

ಗುರುವಾರ, 25 ನವೆಂಬರ್ 2021 (18:01 IST)
ರಾಜ್ಯದಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ರೈತರು ತತ್ತರಿಸಿ ಹೋಗಿದ್ದಾರೆ. ಕಟಾವಿಗೆ ಬಂದಿದ್ದ ಬೆಳೆಯನ್ನು ಮಳೆ ನುಂಗಿ ಹಾಕಿದೆ. ಮಳೆ ಹಾನಿಯಾದ ಪ್ರದೇಶದ ಸಮಿಕ್ಷೆ ನಡೆಸಿ ತ್ವರಿತವಾಗಿ ಪರಿಹಾರ ನೀಡುವ ಭರವಸೆಯನ್ನು ಸರಕಾರ ನೀಡಿದೆ. ಆದರೆ ಸರ್ಕಾರದ ನೀತಿಗಳು ಇದೀಗ ರೈತರಿಗೆ ಪರಿಹಾರ ನೀಡಲು ತೊಡಕಾಗಿವೆ.ನಿಯಮಗಳ ಪ್ರಕಾರ, ಬೆಳೆ ಪರಿಹಾರವು ಕಟಾವು ಮಾಡಿದ ರೈತರಿಗೆ ದೊರೆಯುವುದಿಲ್ಲ. ಕಟಾವು ಮಾಡಿ ರಾಶಿ ಹಾಕಿದ ರೈತರಿಗೆ ಪರಿಹಾರ ನೀಡಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಲ್ಲಿ ಅವಕಾಶವಿಲ್ಲ. ಹೊಲದಲ್ಲಿಯೇ ಇರುವ ಬೆಳೆಗೆ ಮಾತ್ರ ಪರಿಹಾರ ನೀಡಲು ಅವಕಾಶವಿದೆ. ಇದರಿಂದಾಗಿ ರೈತರು ಸಂಕಷ್ಟ ಪಡುವಂತಾಗಿದೆ.
 
ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಹುತೇಕರು ಬೆಳೆಯನ್ನು ಕಟಾವು ಮಾಡಿ ಒಂದು ಕಡೆ ರಾಶಿ ಹಾಕಿದ್ದಾರೆ. ಕಟಾವು ಮಾಡಿ ರಾಶಿ ಮಾಡಲು ಅವಕಾಶ ಸಿಗದ ಕಾರಣ ಒಂದೆಡೆ ಗುಡ್ಡೆ ಹಾಕಿದ್ದಾರೆ. ಇಂತಹ ಬೆಳೆಯು ಈಗ ಮಳೆಯಿಂದಾಗಿ ಹಾಳಾಗಿದೆ. ಆದರೆ, ಇವುಗಳಿಗೆ ಪರಿಹಾರ ನೀಡಲು ಆವಕಾಶವಿಲ್ಲ. ಇದೇ ಕಾರಣಕ್ಕೆ ರೈತರು ದಿಕ್ಕು ತೋಚದಂತಾಗಿದ್ದಾರೆ.
 
ಮಳೆ ಹಾನಿ ಸಮಿಕ್ಷೆಯನ್ನು ಹೊಲದಲ್ಲಿದ್ದ ಬೆಳೆ ನಾಶವಾಗಿದ್ದರೆ ಮಾತ್ರ ಹಾನಿ ಎಂದು ಪರಿಗಣಿಸಲಾಗಿದೆ. ಆದರೆ ಈಗ ಹೊಲಗಳಿಗಿಂತ ಅಧಿಕ ಪ್ರಮಾಣದಲ್ಲಿ ರಾಶಿ ಮಾಡಿ ಹಾಕಿದ ಬೆಳೆ ನಾಶವಾಗಿದೆ. ಭತ್ತ ಹಾಗು ಮೆಕ್ಕೆಜೋಳವು ಮೊಳಕೆಯೊಡೆದಿದೆ. ಮೊಳಕೆಯೊಡೆದ ಧಾನ್ಯಕ್ಕೆ ಮಾರುಕಟ್ಟೆ ಇಲ್ಲ. ಇದರಿಂದಾಗಿ ರೈತರ ನೋವಿನ ಬೆಂಕಿಗೆ ತುಪ್ಪ ಸುರಿದಂತಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ