ರಾಜಾಕಾಲುವೆಗಳಲ್ಲಿ ಸರಾಗವಾಗಿ ನೀರು ಹರಿಯಲು ಬೃಹತ್ ಯೋಜನೆ : ಸಿಎಂ
ಮಂಗಳವಾರ, 23 ನವೆಂಬರ್ 2021 (21:27 IST)
ರಾಜಾಕಾಲುವೆಗಳನ್ನು ಅಗಲೀಕರಣಗೊಳಿಸಿ ಹೊಸ ಚರಂಡಿ ವ್ಯವಸ್ಥೆಯ ಜತೆಗೆ ಸಂಪರ್ಕ ಕಾಲುವೆಗಳನ್ನು ನಿರ್ಮಿಸಲು ಬೃಹತ್ ಯೋಜನೆಯನ್ನು ರೂಪಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಭಾರಿ ಮಳೆಯಿಂದ ಜಲಾವೃತವಾಗಿದ್ದ ಹಾಗೂ ಮಾನ್ಯತಾ ಟೆಕ್ ಪಾರ್ಕ್ ಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಜವಾಹರ ಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ ಸೈಂಟಿಫಿಕ್ ರಿಸರ್ಚ್ ಸಂಸ್ಥೆಯಲ್ಲಿ ಲ್ಯಾಬ್ ಗಳಿಗೆ ನೀರು ನುಗ್ಗಿ ಸ್ಯಾಂಪಲ್ ಗಳು ದೊಡ್ಡ ಪ್ರಮಾಣದಲ್ಲಿ ನಷ್ಟವಾಗಿವೆ. ನಮ್ಮ ಬದುಕು, ಸಮಾಜ ವೈಜ್ಞಾನಿಕ ಸಂಶೋಧನೆಯಿಂದಲೇ ಬೆಳೆದಿರುವುದು. ಇದು ಭವಿಷ್ಯವನ್ನು ನಿರ್ಮಾಣಮಾಡುವ ಪ್ರಮುಖ ಕೇಂದ್ರ. ಈ ಸಂಸ್ಥೆಯನ್ನು ಯಾವುದೇ ಸಂದರ್ಭದಲ್ಲಿ ರಕ್ಷಣೆ ಮಾಡುವುದು ನಮ್ಮ ಕರ್ತವ್ಯ. ವಿಶೇಷ ಕಾಳಜಿ ತೆಗೆದುಕೊಂಡು ಇಲ್ಲಿನ ಸಂಶೋಧನಾ ಲ್ಯಾಬ್, ಗ್ರಂಥಾಲಯಗಳಿಗೆ ತೊಂದರೆಯಾಗದಂತೆ ಕ್ರಮ ತೆಗೆದುಕೊಳ್ಳಲಾಗುವುದು. ಇದಕ್ಕಾಗಿ ಸಂಸ್ಥೆಯ ಸಹಕಾರವನ್ನೂ ಕೋರಲಾಗಿದೆ ಹಾಗೂ ಈ ಬೃಹತ್ ಯೋಜನೆಯಲ್ಲಿ ಸಂಸ್ಥೆಯ ಮುಖ್ಯಸ್ಥರ ನೆರವನ್ನೂ ಪಡೆಯಲಾಗುವುದು ಎಂದು ತಿಳಿಸಿದರು.
ರಾಜಕಾಲುವೆ ಅಗಲೀಕರಣಕ್ಕೆ ಕ್ರಮ:
ಎರಡು ಗಂಟೆ ಅವಧಿಯಲ್ಲಿ 138 ಮಿಮಿ ಮಳೆ ಬಿದ್ದಿದೆ, ಗ್ರಾಮೀಣ ಪ್ರದೇಶ, ಯಲಹಂಕ ಸೇರಿದಂತೆ ನಗರ ಪ್ರದೇಶಗಳಲ್ಲಿ ಏಕರೀತಿಯಲ್ಲಿ ಮಳೆ ಬಂದಿದೆ. ಎಲ್ಲಾ ಕೆರೆಗಳು ತುಂಬಿವೆ. ಮೇಲ್ಭಾಗದಲ್ಲಿರುವ ಕೆರೆಗಳು ಮತ್ತು ಚರಂಡಿಗಳನ್ನು ಬೇರೆ ದಿಕ್ಕಿಗೆ ತಿರುಗಿಸಲು ಸೂಚನೆ ನೀಡಲಾಗಿದೆ. ಈ ಬಾರಿಯ ಮಳೆ ರಾಜಕಾಲುವೆಯನ್ನೂ ಮೀರಿ ಹರಿದಿರುವ ದೊಡ್ಡ ಪ್ರಮಾಣದ ಅಕಾಲಿಕ ಮಳೆ. ಯಲಹಂಕದಿಂದ ಜಕ್ಕೂರು, ರಾಚೇನಹಳ್ಳಿ ಕೆರೆ, ನಂತರ ಕಡೆ ಆರ್ ಪುರ ದಿಂದ ಪಿನಾಕಿನಿ ನದಿಗೆ ಸೇರಿ ತಮಿಳುನಾಡಿಗೆ ಹೋಗುವ ಕಾಲುವೆ 8 ರಿಂದ 10 ಅಡಿಮಾತ್ರ ಅಗಲವಿದ್ದು ಬಹಳ ಚಿಕ್ಕದಾಗಿದೆ. ಈ ಕೂಡಲೇ ನೀರು ನುಗ್ಗಿದ ಮನೆ, ವಸತಿ ಸಂಕೀರ್ಣ, ಸಂಸ್ಥೆಗಳಲ್ಲಿಯೂ ಡೈವರ್ಷನ್ ಗೆ ಕ್ರಮ ತೆಗೆದುಕೊಳ್ಳಲು ಸೂಚಿಸಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.
ರಾಜಕಾಲುವೆ ಒತ್ತುವರಿ ಮನೆಗಳ ಶೀಘ್ರ ತೆರವು :
ಬಿಬಿಎಂಪಿ 714 ಅಕ್ರಮ ಕಟ್ಟಡಗಳನ್ನು ಗುರುತಿಸಿದ್ದು, ಅವುಗಳನ್ನು ತೆರೆವುಗೊಳಿಸುವ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಯಿಸಿ, ರಾಜಕಾಲುವೆ ಮೇಲೆ ನಿರ್ಮಿಸಲಾದ ಮನೆಗಳನ್ನು ತೆರೆವುಗೊಳಿಸುವುದು, ಬಡ ಕುಟುಂಬಗಳನ್ನು ಬೇರೆಡೆಗೆ ವರ್ಗಾಯಿಸಿ ಅನುಕೂಲ ಕಲ್ಪಿಸಲಾಗುವುದು. ಬಫರ್ ಝೋನ್ ನಲ್ಲಿ ಕಟ್ಟಿರುವ ಮನೆ, ಸಂಕೀರ್ಣಗಳನ್ನು ಸೂಕ್ತ ಕಾಲಾವಕಾಶ ನೀಡಿ ನಂತರ ತೆರೆವುಗೊಳಿಸಲಾಗುವುದು ಎಂದರು.
ಮಳೆಹಾನಿ ಕುರಿತು ವರದಿ ಪಡೆದ ಪ್ರಧಾನಮಂತ್ರಿಗಳು:
ಇಂದು ಬೆಳಿಗ್ಗೆ ಪ್ರಧಾನ ಮಂತ್ರಿಯವರು ದೂರವಾಣಿ ಕರೆ ಮಾಡಿ, ರಾಜ್ಯದಲ್ಲಿ ಮಳೆ , ಬೆಳೆಹಾನಿ, ಪ್ರಾಣಹಾನಿ, ಪರಿಹಾರ ಕ್ರಮಗಳ ಬಗ್ಗೆ ವಿಚಾರಿಸಿದ್ದು, ಬೆಂಗಳೂರು ನಗರದ ಬಗ್ಗೆ ಹೆಚ್ಚಿನ ಕಾಳಜಿ ತೋರಿಸಿ, ಆಗಿರುವ ತೊಂದರೆ , ನಷ್ಟದ ವಿವರವನ್ನು ಪಡೆದುಕೊಂಡರು. ಪರಿಸ್ಥಿತಿಯ ಸುಧಾರಣೆಗೆ ಅಲ್ಪಾವಧಿ ಹಾಗೂ ದೀರ್ಘಾವಧಿ ಕ್ರಮಗಳನ್ನು ತೆಗೆದುಕೊಳ್ಳಲು ಸೂಚನೆಯನ್ನು ನೀಡಿದ್ದಾರೆ ಎಂದು ತಿಳಿಸಿದರು.
ಮಾನ್ಯತಾ ಟೆಕ್ ಪಾರ್ಕ್ :
ಮಾನ್ಯತಾ ಟೆಕ್ ಪಾರ್ಕ್ ಒಂದು ಪ್ರತಿಷ್ಠಿತ ಸಂಕೀರ್ಣ. ಇಲ್ಲಿರುವ ಆಂತರಿಕ ಚರಂಡಿ ವ್ಯವಸ್ಥೆಯಿಂದ ನೀರು ವಾಪಸ್ಸು ಬರುತ್ತಿದೆ. ಬಾಹ್ಯ ಹಾಗೂ ಆಂತರಿಕ ಚರಂಡಿ ವ್ಯವಸ್ಥೆಯನ್ನು ಪರಸ್ಪರ ಸಹಕಾರದಿಂದ ಸರಿಪಡಿಸಲಾಗುವುದು. ಇಲ್ಲಿ ಕೆಲಸ ಮಾಡುವ ನೌಕರರಿಗೆ ಯಾವುದೇ ತೊಂದರೆಯಾಗದಂತೆ ಶೀಘ್ರವಾಗಿ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಯೋಜನಾಬದ್ಧ ಚರಂಡಿ ವ್ಯವಸ್ಥೆಯನ್ನು ಮಾಡಲು ಕಾಲಾವಕಾಶ ಬೇಕು. ತಗ್ಗು ಪ್ರದೇಶ, ಕೆರೆಯಂಗಳದ ಪ್ರದೇಶಗಳಲ್ಲಿ ನೀರು ಹರಿದು ತುಂಬಿಕೊಳ್ಳುತ್ತಿದೆ. ಯಲಹಂಕ, ಮಹಾದೇವಪುರ, ಪಿನಾಕಿನಿಯವರೆಗೆ ಸರಾಗವಾಗಿ ನೀರು ಹರಿಯಲು ಅವಕಾಶ ಮಾಡಿಕೊಡುವ ಮೂಲಕ ತಗ್ಗು ಪ್ರದೇಶಗಳನ್ನು ಇದರಿಂದ ರಕ್ಷಿಸಬಹುದಾಗಿದೆ. ಇದಕ್ಕಾಗಿ ಒಂದು ಬೃಹತ್ ಯೋಜನೆಯನ್ನು ರೂಪಿಸಲಾಗುವುದು ಎಂದು ತಿಳಿಸಿದರು.