ಜನ ಸ್ನೇಹಿ ಟೋಯಿಂಗ್ ವ್ಯವಸ್ಥೆ ಶೀಘ್ರದಲ್ಲೇ ಜಾರಿ

ಮಂಗಳವಾರ, 1 ಫೆಬ್ರವರಿ 2022 (18:21 IST)
ಜನಸ್ನೇಹಿ ಟೋಯಿಂಗ್ ವ್ಯವಸ್ಥೆ ಜಾರಿ ಮಾಡುವ ಸಂಬಂಧ ಮುಖ್ಯಮಂತ್ರಿಗಳು ಕೆಲವು ಸಲಹೆ ನೀಡಿದ್ದಾರೆ. ಅದರಂತೆ ಟೋಯಿಂಗ್ ನಲ್ಲಿ ಕೆಲವು ಬದಲಾವಣೆ ತರಲು ಚಿಂತನೆ ನಡೆದಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್ ತಿಳಿಸಿದ್ದಾರೆ.
 
ದಿವ್ಯಾಂಗ ಮಹಿಳೆಗೆ ಹಲಸೂರು ಗೇಟ್ ಸಂಚಾರ ಠಾಣೆ ಎಎಸ್‌ಐ ಹಲ್ಲೆ ನಡೆಸಿದ ಪ್ರಕರಣದ ಬಳಿಕ ಬೆಂಗಳೂರಿನಲ್ಲಿ ಟೋಯಿಂಗ್ ಬಗ್ಗೆ ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿತ್ತು.
ಬೆನ್ನಲ್ಲೇ ಜೀವನ್ ಭೀಮಾ ನಗರದ ಡೆಲಿವರಿ ಬಾಯ್‌ನ ವಾಹನ ಟೋಯಿಂಗ್ ಮಾಡಿದ್ದು, ಆತ ಟೋಯಿಂಗ್ ವಾಹನದ ಹಿಂದೆ ಓಡಿ ಹೋಗುತ್ತಿರುವ ವಿಡಿಯೋ ಕೂಡ ವೈರಲ್ ಆಗಿತ್ತು. ಈ ಎರಡೂ ಘಟನೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸ್ವತಃ ಸಭೆ ನಡೆಸಿ ಜನ ಸ್ನೇಹಿ ಟೋಯಿಂಗ್ ವ್ಯವಸ್ಥೆ ಜಾರಿ ಮಾಡುವುದಾಗಿ ಭರವಸೆ ನೀಡಿದ್ದರು.
 
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಟೋಯಿಂಗ್ ಸಂಬಂಧ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಕರೆದು ಸುದೀರ್ಘ ಸಮಾಲೋಚನೆ ನಡೆಸಿದರು. ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್, ಪೊಲೀಸ್ ಆಯುಕ್ತ ಕಮಲಪಂತ್, ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಬಿ.ಆರ್. ನೇತೃತ್ವದಲ್ಲಿ ಸುದೀರ್ಘ ಚರ್ಚೆ ನಡೆಯಿತು.
 
ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್, ಟೋಯಿಂಗ್ ಬಗ್ಗೆ ಸುದೀರ್ಘ ಚರ್ಚೆ ನಡೆದಿದೆ. ರಾಂಗ್ ಪಾರ್ಕಿಂಗ್ ಮಾಡುವ ಸಂಬಂಧ ಬೇರೆಯದ್ದೇ ಕ್ರಮ ಜರುಗಿಸುವ ಸಂಬಂಧ ಚಿಂತನೆ ನಡೆದಿದೆ ಎಂದು ತಿಳಿಸಿದ್ದಾರೆ.
 
ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಮಾತನಾಡಿ, 'ಟೋಯಿಂಗ್ ವಾಹನ ಕಾರ್ಯವೈಖರಿ ಬಗ್ಗೆ ಮುಖ್ಯಮಂತ್ರಿಗಳ ಸಭೆಯಲ್ಲಿ ಸುದೀರ್ಘವಾಗಿ ಚರ್ಚೆ ನಡೆಯಿತು. ಕೆಲವು ಬದಲಾವಣೆಗಳನ್ನು ಸೂಚಿಸಿದ್ದಾರೆ. ಪಾರದರ್ಶಕ ದೃಷ್ಟಿಯಿಂದ ಅವರು ಸೂಚಿಸಿದ್ದು, ಅದರಂತೆ ಟೋಯಿಂಗ್ ವಾಹನ ನಿಯಂತ್ರಣಕ್ಕೆ ಕ್ರಮ ವಹಿಸಲಾಗುವುದು' ಎಂದು ಸ್ಪಷ್ಟಪಡಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ