ಇನ್ಮುಂದೆ ಮಿಸ್ಟರ್ ಸಿದ್ದರಾಮಯ್ಯರ ಆಟ ನಡೆಯುವುದಿಲ್ಲ: ಆರ್‌ ಅಶೋಕ್ ಕಿಡಿ

Sampriya

ಮಂಗಳವಾರ, 18 ಜೂನ್ 2024 (17:11 IST)
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿಚಾರವನ್ನು ಮುಂದಿಟ್ಟು ವಿಪಕ್ಷ ನಾಯಕ ಆರ್ ಅಶೋಕ್ ಅವರು ಸಿದ್ದರಾಮಯ್ಯ ಅವರ ಐದು ಗ್ಯಾರಂಟಿಗಳನ್ನು ತರಾಟೆಗೆ ತೆಗೆದುಕೊಂಡರು. ಈ ಬಗ್ಗೆ ಎಕ್ಸ್‌ನಲ್ಲಿ ಸುದೀರ್ಘವಾಗಿ ಆರ್‌ ಅಶೋಕ್ ಅವರು ಬರೆದುಕೊಂಡಿದ್ದಾರೆ.

ಅಸಮರ್ಥ ಸಿಎಂ ಸಿದ್ದರಾಮಯ್ಯರವರ ಐದು ಗ್ಯಾರಂಟಿ ಗುಣಗಳು
✔️ದಿಟ್ಟ ಪ್ರಶ್ನೆಗಳು ಎದುರಾದಾಗ ಅಹಂಕಾರದ ಮಾತುಗಳನ್ನಾಡಿ ವೈಯಕ್ತಿಕ ನಿಂದನೆ ಮಾಡುವುದು
✔️ಜ್ವಲಂತ ಸಮಸ್ಯೆಗಳನ್ನು ಪರಿಹರಿಸದೆ ಜನರ ಗಮನ ಬೇರೆಡೆ ಸೆಳೆದು ದಿಕ್ಕು ತಪ್ಪಿಸುವುದು,
✔️ಮತ್ತೊಬ್ಬರ ಸಾಧನೆಯನ್ನು ತನ್ನದೆಂದು ಹೇಳಿಕೊಂಡು ತಿರುಗಾಡುವುದು
✔️ಪುಕ್ಕಟೆ ಪ್ರಚಾರ ಪಡೆಯುವುದು
✔️ನಾನೊಬ್ಬನೇ ಮಹಾ ಬುದ್ಧಿವಂತ ಎಂದು ಗರ್ವ ಪಡುವುದು


ನಿಮ್ಮ ಈ ಆಟಗಳು ಇನ್ನು ಮುಂದೆ ನಡೆಯುವುದಿಲ್ಲ ಮಿಸ್ಟರ್ ಸಿದ್ದರಾಮಯ್ಯ  ಅವರೇ.

ಗೆದ್ದಲು ಕಷ್ಟ ಪಟ್ಟು ಹುತ್ತ ಕಟ್ಟುತ್ತದೆ. ಹುತ್ತ ಕಟ್ಟಲು ಯಾವುದೇ ರೀತಿಯಲ್ಲಿಯೂ ಸಾಮರ್ಥ್ಯವಿಲ್ಲದ ಹಾವು ಮಾತ್ರ ಕಟ್ಟುವ ಕಾರ್ಯವೆಲ್ಲಾ ಮುಗಿದ ಮೇಲೆ ಹುತ್ತದೊಳಗೆ ಕೂರುತ್ತದೆ. ಇದು ನಿಮ್ಮ ಯೋಗ್ಯತೆ.

ಮತ್ತೊಮ್ಮೆ ಎಚ್ಚರಿಕೆ ನೀಡುತ್ತಿದ್ದೇನೆ. ನಾಲ್ಕು ಅಹಂಕಾರದ ಮಾತುಗಳನ್ನಾಡಿದ ಮಾತ್ರಕ್ಕೆ ವಿಪಕ್ಷಗಳ ಬಾಯಿ ಮುಚ್ಚಿಸಬಹುದು ಎಂಬ ಭ್ರಮೆಯಿಂದ ಹೊರಗೆ ಬನ್ನಿ. ನಿಮ್ಮ ಅಹಂಕಾರದ, ದರ್ಪದ ಮಾತುಗಳು ನಿಮ್ಮ ಚಾರಿತ್ರ್ಯವನ್ನ ಪ್ರದರ್ಶನ ಮಾಡುತ್ತವೆಯೇ ಹೊರತು ಅದರಿಂದ ನನಗೆ ಯಾವುದೇ ನಷ್ಟವಿಲ್ಲ. ನಿಮ್ಮ ಅಹಂಕಾರದಿಂದ ನನ್ನ ದನಿ ಅಡಗಿಸಲೂ ಸಾಧ್ಯವಿಲ್ಲ.

ಕುಣಿಯಲಾರದವನಿಗೆ ನೆಲ ಡೊಂಕು ಎಂಬಂತೆ ತಮ್ಮ ವೈಫಲ್ಯ, ದಡ್ಡತನವನ್ನ ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರದ ಬಗ್ಗೆ ಯಾಕೆ ಟೀಕೆ ಮಾಡುತ್ತೀರಿ ಅಸಮರ್ಥ ಸಿಎಂ ಸಿದ್ದರಾಮಯ್ಯನವರೇ.

ಏಪ್ರಿಲ್ 2004 ರಿಂದ ಏಪ್ರಿಲ್ 2014 ರವರೆಗೆ ಅಂದರೆ ಯುಪಿಎ ಸರ್ಕಾರದ ಅವಧಿಯಲ್ಲಿ ಕೇಂದ್ರ ಸರ್ಕಾರ ರಾಜ್ಯಗಳಿಗೆ 32% ತೆರಿಗೆ ಹಂಚಿಕೆ ಮಾಡುತ್ತಿತ್ತು. ಆದರೆ ಕಳೆದ ಹತ್ತು ವರ್ಷಗಳ ಎನ್ ಡಿಎ ಸರ್ಕಾರದಲ್ಲಿ, ಏಪ್ರಿಲ್ 2014 ರಿಂದ ಏಪ್ರಿಲ್ 2024, ರಾಜ್ಯಗಳಿಗೆ 42% ತೆರಿಗೆ ಹಂಚಕೆಯಾಗಿದೆ. ಅಂದರೆ ಯುಪಿಎ ಸರ್ಕಾರ 68% ತೆರಿಗೆ ಹಣವನ್ನ ಕೇಂದ್ರದ ಬಳಿಯೇ ಉಳಿಸಿಕೊಳ್ಳುತ್ತಿತ್ತು, ಮೋದಿ ಅವರ ಸರ್ಕಾರ ಕೇವಲ 58% ತೆರಿಗೆಯನ್ನ ಕೇಂದ್ರದ ಬಳಿ ಉಳಿಸಿಕೊಳ್ಳುತ್ತಿದೆ.

ಕಳೆದ ಮೂರು ವರ್ಷಗಳ ಜಾಗತಿಕ ಇಂಧನ ಪ್ರಕ್ಷುಬ್ಧತೆಯ ಸಮಯದಲ್ಲಿ, ಪ್ರಧಾನಿ ಮೋದಿ ಅವರ ನೇತೃತ್ವದ ಎನ್‌ಡಿಎ ಸರ್ಕಾರವು ಭಾರತದ ಕಚ್ಚಾ ತೈಲ ಖರೀದಿ ಮೂಲಗಳನ್ನು ಬೇರೆ ಬೇರೆ ದೇಶಗಳಿಗೆ ವಿಸ್ತರಿಸಿದ ಸಮಯೋಚಿತ ನಿರ್ಧಾರದ ಪರಿಣಾಮವಾಗಿ ಪೆಟ್ರೋಲ್ ಬೆಲೆಗಳು ಸುಮಾರು 14% ರಷ್ಟು ಕಡಿಮೆಯಾಗಿದೆ ಮತ್ತು ಡೀಸೆಲ್ ಬೆಲೆಗಳು ನವೆಂಬರ್ 2021-ಮೇ 2024 ರ ಅವಧಿಯಲ್ಲಿ ಸುಮಾರು 11% ರಷ್ಟು ಕಡಿಮೆಯಾಗಿದೆ. ಅದೇ ಅವಧಿಯಲ್ಲಿ, ಅಮೆರಿಕದಲ್ಲಿ ಪೆಟ್ರೋಲ್ ಬೆಲೆಗಳು 29% ರಷ್ಟು ಏರಿಕೆಯಾಗಿದೆ, ನೆರೆಯ ಪಾಕಿಸ್ತಾನ ಮತ್ತು ಶ್ರೀಲಂಕಾ ಜಾಗತಿಕ ಕಚ್ಚಾ ಬೆಲೆಗಳ ಏರಿಕೆಯಿಂದಾಗಿ ತೀವ್ರ ಆರ್ಥಿಕ ಒತ್ತಡವನ್ನು ಎದುರಿಸಿದವು. ಸದಾ ಚಿಲ್ಲರೆ ರಾಜಕಾರಣದಲ್ಲಿ ಕಾಲ ಕಳೆಯುವ ತಮಗೆ ಜಾಗತಿಕ ರಾಜಕೀಯ, ಜಾಗತಿಕ  ಆರ್ಥಿಕ ಪರಿಸ್ಥಿತಿಯ ಬಗ್ಗೆ ಅರಿವೂ ಇಲ್ಲ, ಅದನ್ನ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವೂ ತಮಗಿಲ್ಲ. ತಮಗೆ ಅರ್ಥವಾಗದಿದ್ದರೆ ಸುಮ್ಮನಿದ್ದು ಬಿಡಿ. ತಮ್ಮ ಪೆದ್ದತನ ಪ್ರದರ್ಶನ ಮಾಡಿ ಇನ್ನಷ್ಟು ಸಣ್ಣವರಾಗಬೇಡಿ.

ಅಷ್ಟೇ ಅಲ್ಲದೆ ಕೇಂದ್ರ ಸರ್ಕಾರವು ನವೆಂಬರ್ 2021 ಮತ್ತು ಮೇ 2022ರಲ್ಲಿ ಎರಡು ಬಾರಿ ಅಬಕಾರಿ ಸುಂಕದಲ್ಲಿ ಗಣನೀಯ ಕಡಿತ ಮಾಡಿತ್ತು. ನವೆಂಬರ್ 2021ರಲ್ಲಿ ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಲೀಟರ್‌ಗೆ ₹5 ಮತ್ತು ₹10 ಕಡಿಮೆ ಮಾಡಿತ್ತು. ನಂತರ ಮೇ 2022 ರಲ್ಲಿ ಮತ್ತೊಮ್ಮೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಕ್ರಮವಾಗಿ ಲೀಟರ್‌ಗೆ ₹8 ಮತ್ತು ₹6 ರಷ್ಟು ಕಡಿತಗೊಳಿಸಲಾಯಿತು. ಇತ್ತೀಚೆಗೆ ಈ ವರ್ಷ ಮಾರ್ಚ್ 14 ರಂದು ತೈಲ ಕಂಪನಿಗಳು ಲೀಟರ್‌ಗೆ 2 ರೂಪಾಯಿ ಕಡಿಮೆ ಮಾಡಿವೆ.

15 ಬಜೆಟ್ ಮಂಡಿಸಿರುವ ಸ್ವಯಂ ಘೋಷಿತ ಆರ್ಥಿಕ ತಜ್ಞರಲ್ಲವೇ ತಾವು? ತಮ್ಮ ಪ್ರಕಾರ ತಾವು ಮಹಾ ಬುದ್ಧಿವಂತರಲ್ಲವೇ? ಹಾಗಾದರೆ ತಾವು ಮಾಡಿರುವ ಯಾವುದಾದರೂ ಒಂದೇ ಒಂದು ಸುಧಾರಣೆ ತೋರಿಸಿ. ರಾಜ್ಯದ ಜನ ತಮ್ಮನ್ನ, ತಮ್ಮ ಆಡಳಿತವನ್ನು ನೆನಪಿನಲ್ಲಿ ಇಟ್ಟುಕೊಳ್ಳಬಹುದಾದ ಯಾವುದಾದರೂ ಒಂದು ಗಣನೀಯ ಮೂಲಸೌಕರ್ಯ ಯೋಜನೆ, ಕೈಗಾರಿಕಾ ನೀತಿ ಸುಧಾರಣೆ, ಮಾನವ ಅಭಿವೃದ್ಧಿ ಸೂಚ್ಯಂಕ ಸುಧಾರಣೆ, ಯಾವುದಾದರೂ ಸಾಧನೆ ಇದೆಯೇ? ನಿಮ್ಮ ಯೋಗ್ಯತೆಗೆ ಯಾವುದೂ ಇಲ್ಲ.

ಕರ್ನಾಟಕ ಕಂಡ ಅತ್ಯಂತ ಅಸಮರ್ಥ, ಪೆದ್ದ ಮುಖ್ಯಮಂತ್ರಿ ಅಂದರೆ ಅದು ತಾವೇ ಮಿಸ್ಟರ್ ಸಿದ್ದಾರಮಯ್ಯನವರೇ. ಇತಿಹಾಸ ನಿಮ್ಮನ್ನ ಕರೆಯುವುದು ಹೀಗೆ. ನೆನಪಿಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ