ಕಾವೇರಿ ವಿವಾದ: ಸುಪ್ರೀಂಕೋರ್ಟ್ ಆದೇಶ ಪಾಲಿಸದಿರಲು ರಾಜ್ಯ ಸರಕಾರ ನಿರ್ಧಾರ

ಗುರುವಾರ, 5 ಜನವರಿ 2017 (11:42 IST)
ಕಾವೇರಿ ನದಿಯಿಂದ ತಮಿಳುನಾಡಿಗೆ ಪ್ರತಿನಿತ್ಯ 2 ಸಾವಿರ ಕ್ಯೂಸೆಕ್ ನೀರು ಹರಿಸುವ ಆದೇಶವನ್ನು ಮುಂದುವರಿಸುವಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ಪಾಲಿಸದಿರಲು ರಾಜ್ಯ ಸರಕಾರ ತೀರ್ಮಾನಿಸಿದೆ. 
ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ಇದ್ದು, ಮಳೆಯಿಲ್ಲದೆ ಜಲಾಶಯಗಳ ನೀರಿನ ಮಟ್ಟ ಕುಸಿದಿದೆ. ಹೀಗಾಗಿ ತಮಿಳುನಾಡಿಗೆ ನೀರು ಬಿಡುವ ಸ್ಥಿತಿಯಲ್ಲಿ ರಾಜ್ಯ ಇಲ್ಲ. ಒಂದೆರಡು ದಿನಗಳಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಪುನರ್ ಪರಿಶೀಲನೆ ಮಾಡುವಂತೆ ರಾಜ್ಯ ಸರಕಾರ ಮಾರ್ಪಾಡು ಅರ್ಜಿಯನ್ನು ಸಲ್ಲಿಸಲಿದೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ. 
 
ಕಾವೇರಿ ನ್ಯಾಯಾಧೀಕರಣ ನೀಡಿದ್ದ ಐ ತೀರ್ಪು ಹಾಗೂ ತಮಿಳುನಾಡಿಗೆ ಪ್ರತಿನಿತ್ಯ 2 ಸಾವಿರ ಕ್ಯೂಸೆಕ್ ನೀರು ಹರಿಸುವ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ವಿಶೇಷ ಮೇಲ್ಮನವಿ ಅರ್ಜಿಗಳ ವಿಚಾರಣೆ ನಿನ್ನೆ ಸುಪ್ರೀಂಕೋರ್ಟ್‌ನಲ್ಲಿ ನಡೆಯಿತು.  
 
ಮೇಲ್ಮನವಿ ಅರ್ಜಿ ಇತ್ಯರ್ಥವಾಗುವವರೆಗೂ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿ ಸದಸ್ಯ ಪೀಠ ರಾಜ್ಯ ಸರಕಾರಕ್ಕೆ ಸೂಚನೆ ನೀಡಿತ್ತು.  
 
ಮಂದಿನ ವಿಚಾರಣೆ ಫೆ-7ರಂದು ನಡೆಯಲಿದೆ. ಅಲ್ಲಿಯವರೆಗೂ ಮಧ್ಯಂತರ ಆದೇಶ ಜಾರಿಯಲ್ಲಿರಲಿದ್ದು, ಕಾವೇರಿ ನದಿಯಿಂದ ತಮಿಳುನಾಡಿಗೆ ಪ್ರತಿನಿತ್ಯ 2 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ನ್ಯಾಯಾಲಯ ಆದೇಶ ನೀಡಿತ್ತು. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ