ಇಂದು ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣ ಮಳೆ

ಸೋಮವಾರ, 9 ಆಗಸ್ಟ್ 2021 (07:32 IST)
Karnataka Rains Today:(ಆ.09): ಕರ್ನಾಟಕದಲ್ಲಿ ಕಳೆದ 6-7 ದಿನಗಳಿಂದ ಮತ್ತೆ ಮುಂಗಾರು ಚುರುಕುಗೊಂಡಿದೆ. ಜುಲೈ ನಂತರ ಕೊಂಚ ವಿರಾಮ ನೀಡಿದ್ದ ಮಳೆರಾಯ, ಕಳೆದ ಒಂದು ವಾರದಿಂದ ಮತ್ತೆ ತನ್ನ ಆರ್ಭಟ ಮುಂದುವರೆಸಿದ್ದಾನೆ. ಕರಾವಳಿ ಮತ್ತು ಮಲೆನಾಡಿನಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದೆ.

ಜುಲೈ ತಿಂಗಳಲ್ಲಿ ವರುಣನ ಆರ್ಭಟಕ್ಕೆ ಮಲೆನಾಡು, ಕರಾವಳಿ ಮತ್ತು ಉತ್ತರ ಕರ್ನಾಟಕದ ಜನರು ಅಕ್ಷರಶಃ ತತ್ತರಿಸಿ ಹೋಗಿದ್ದರು. ಈಗ ಮತ್ತೆ ಮಳೆರಾಯನ ಆರ್ಭಟ ಶುರುವಾಗಿದೆ. ಇಂದೂ ಸಹ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುಂದುವರೆಯಲಿದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಭಾರತೀಯ ಹವಾವಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದ ಮಲೆನಾಡು ಜಿಲ್ಲೆಗಳಲ್ಲಿ ಚದುರಿದಂತೆ ವ್ಯಾಪಕವಾಗಿ ಸಾಧಾರಣ ಮಳೆಯಾಗಲಿದೆ. ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಮುನ್ಸೂಚನೆ ನೀಡಿದೆ.
ಕಳೆದ 24 ಗಂಟೆಗಳಲ್ಲಿ ಬೆಂಗಳೂರಿನ ವಿದ್ಯಾಪೀಠದಲ್ಲಿ 21 ಮಿ.ಮೀ. ಮಳೆಯಾಗಿದೆ. ಅದೇ ರೀತಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಗ್ರಗೋಣದಲ್ಲಿ 142.5 ಮಿ.ಮೀ. ಮಳೆಯಾಗಿದೆ. ನಿನ್ನೆ ರಾಜ್ಯದಲ್ಲಿ ಅತ್ಯಧಿಕ ಮಳೆಯಾಗಿರುವ ಪ್ರದೇಶ ಇದಾಗಿದೆ.
ಕಳೆದ ನಾಲ್ಕೈದು ದಿನಗಳಿಂದ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಾಧಾರಣ ಮಳೆಯಾಗುತ್ತಿದೆ. ಜುಲೈ ತಿಂಗಳಾಂತ್ಯದಲ್ಲಿ ಕೊಂಚ ಬಿಡುವು ಕೊಟ್ಟಿದ್ದ ಮಳೆರಾಯ, ಮತ್ತೆ ತನ್ನ ಆರ್ಭಟ ತೋರಿಸುತ್ತಿದ್ದಾನೆ. ನಿನ್ನೆ ಸಹ ಬೆಂಗಳೂರಿನಲ್ಲಿ ಮಳೆಯಾಗಿದೆ. ಇಂದು ಮೋಡ ಕವಿದ ವಾತಾವರಣವಿದ್ದು, ಸಂಜೆ ವೇಳೆಗೆ ಮಳೆಯಾಗುವ ನಿರೀಕ್ಷೆ ಇದೆ.
ಕರ್ನಾಟಕದ ಕರಾವಳಿ ಭಾಗದಲ್ಲಿ ಇಂದು ಮಳೆಯಾಗುವ ಸಾಧ್ಯತೆಯಿದೆ. ಮಂಗಳೂರು ಕರಾವಳಿಯಿಂದ ಕರ್ನಾಟಕ ಕರಾವಳಿವರೆಗೆ ಇಂದು ವ್ಯಾಪಕ ಮಳೆಯಾಗಲಿದೆ. ಮಲೆನಾಡು ಭಾಗದ ಜಿಲ್ಲೆಗಳಲ್ಲೂ ಇಂದು ಮಳೆ ಸುರಿಯಲಿದೆ. ಜೊತೆಗೆ ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡು ಜಿಲ್ಲೆಗಳಲ್ಲಿ ಇಂದು ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ