ಕರ್ನಾಟಕ ಒಲಂಪಿಕ್ ಸಂಸ್ಥೆಯ ಅಧ್ಯಕ್ಷ ಗೋವಿಂದರಾಜ್....

ಶುಕ್ರವಾರ, 6 ಆಗಸ್ಟ್ 2021 (20:23 IST)
ಬೆಂಗಳೂರು: ಭಾರತ ಬ್ಯಾಸ್ಕೆಟ್ಬಾಲ್ ಫೆಡೇರೇಷನ್ ಅಧ್ಯಕ್ಷ ಮತ್ತು ಕರ್ನಾಟಕ ಒಲಂಪಿಕ್ ಸಂಸ್ಥೆಯ ಅಧ್ಯಕ್ಷ , ಭಾರತ ಒಲಿಂಪಿಕ್ ಸಂಸ್ಥೆಯ ಉಪಧ್ಯಕ್ಷ , ವಿಧಾನ ಪರಿಷತ್ ಸದಸ್ಯರಾದ ಗೋವಿಂದರಾಜ್ ಈಟಿವಿ ಭಾರತದ ಜೊತೆ ಮಾತನಾಡಿ ನನ್ನ ಮಕ್ಕಳು ಓದಬೇಕು ಎಂದು ಪೋಷಕರು ಹೇಳುತ್ತಾರೆ ಯಾರು ಆಡಲು ಬಿಡುವುದಿಲ್ಲ. ಹೊಟ್ಟೆಗಿಲ್ಲದೆ ಇರುವವರು, ಕಷ್ಟ ಪಡುವವರು ಕ್ರೀಡೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
 
ಹಾಕಿ ಕ್ರೀಡಾಪಟುಗಳನ್ನು ನೋಡಿ ಊಟಕ್ಕೆ ಇಲ್ಲ, ತಾಯಿ ಮನೆಗೆಲಸ ಮಾಡುತ್ತಿದ್ದಾರೆ. ಅನ್ನಕಿಲ್ಲದಿರುವವರು ಬಾಕ್ಸಿಂಗ್ ಮಾಡುತ್ತಾರೆ. ಹರಿಯಾಣ ಅಥವಾ ಯಾವುದೇ ರಾಜ್ಯದಲ್ಲಾಗಲಿ.  ಇಲ್ಲಿನ ಮಧ್ಯಮ ವರ್ಗದ ಕುಟುಂಬಗಳು ಸಂಜೆ ಮಕ್ಕಳು ಶಾಲೆಯಿಂದ ಮನೆಗೆ ಬರುತ್ತಿದಂತೆ ಓದಲು ಹೇಳುತ್ತಾರೆ ಎಂದು ಅಭಿಪ್ರಾಯಪಟ್ಟರು.
 
ನಾನು ಕಣ್ತಪ್ಪಿಸಿ ಫುಟ್ ಬಾಲ್, ಬ್ಯಾಸ್ಕೆಟ್ ಬಾಲ್ ಅಡುತ್ತಿದ್ದೆ ಮತ್ತು ಆದ್ದರಿಂದ ದಿನಾ ಮನೆಯಲ್ಲಿ ಬೈಯುತ್ತಿದ್ದರು ಎಂದು ತಮ್ಮ ಅನುಭವ ಹಂಚಿಕೊಂಡರು.
 
 
ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಹೆಸರಿನ ಬದಲಾವಣೆ ಬಗ್ಗೆ: 
 
ಯಾವುದೇ ಸರ್ಕಾರ ಬಂದರೂ ಅನುಗುಣವಾಗಿ ಹೆಸರು ಬದಲಾಯಿಸುವುದು ಸಾಮಾನ್ಯ. ಹಾಕಿ ಮಾಂತ್ರಿಕ ಧ್ಯಾನ್ ಚಂದ್ ಹೆಸರಿಟ್ಟಿರಿವುದಕ್ಕೆ ಸಂತೋಷ ವ್ಯಕ್ತಪಡಿಸುತ್ತೇನೆ, ಸ್ವಾಗತ ಮಾಡುತ್ತೇನೆ ಎಂದರು.
 
ಆದರೆ ಕ್ರೀಡಾ ಕ್ಷೇತ್ರಕ್ಕೆ ಮೀಸಲಿಟ್ಟಿರುವ ಹಣ ಎರಡರಷ್ಟು ಮೂರರಷ್ಟು ಮಾಡಬೇಕಿದೆ. ಇದರಿಂದ ಕ್ರೀಡಾಪಟುಗಳಿಗೆ ಒಳ್ಳೆಯದಾಗುತ್ತದೆ ಎಂದು ಅಭಿಪ್ರಾಯಪಟ್ಟರು.
 
ರಾಜ್ಯ ಸರ್ಕಾರಗಳಿಗೆ ಸೂಚನೆ: 
 
 
ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ಸೂಚನೆ ನೀಡಬೇಕು. ಇಂತಹ ಕ್ರೀಡೆಯನ್ನು ಅಳವಡಿಸಿಕೊಳ್ಳಬೇಕು. ಉದಾಹರಣೆಗೆ ಹೇಳುವುದಾದರೆ ಕರ್ನಾಟಕದಲ್ಲಿ ಸ್ವಿಮ್ಮಿಂಗ್, ಬ್ಯಾಸ್ಕೆಟ್ ಬಾಲ್, ಒರಿಸ್ಸಾ ದಲ್ಲಿ ಹಾಕಿ, ಹರಿಯಣದಲ್ಲಿ ಬಾಕ್ಸಿಂಗ್ ಕುಸ್ತಿ, ಪಂಜಾಬ್ ನಲ್ಲಿ ಅಥ್ಲೆಟಿಕ್ಸ್ ಹೀಗೆ ಆಯಾ ರಾಜ್ಯಗಳಲ್ಲಿ ಅಕಾಡೆಮಿ ಇರಬೇಕು, ಊಟದ ವ್ಯವಸ್ಥೆ ಆಗಬೇಕು, ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಬೇಕು. 10 ನೆಯ ವಯಸ್ಸಿನಿಂದಲೇ ತಯಾರಿ ಮಾಡಿದರೆ ಮುಂದಿನ ಹತ್ತು ವರ್ಷದಲ್ಲಿ 50 ರಿಂದ 100 ಮೇಡಲ್ ನೋಡಬಹುದು ಎಂದು ಹೇಳಿದರು.
 
ಪೋಷಕರು ಮಕ್ಕಳನ್ನು ಓದಿಸಲು ನೋಡುವ ಬದಲಾಗಿ ಕ್ರೀಡೆಗೆ ಪ್ರೋತ್ಸಾಹ ನೀಡಬೇಕು. ಬಡತನದಲ್ಲಿರುವವರು ಮಾತ್ರ ಹಾಕಿ, ಬಾಕ್ಸಿಂಗ್ ನಲ್ಲಿ , ಕುಸ್ತಿಯಲ್ಲಿ ನೋಡುತ್ತಿದ್ದೇವೆ. ಮಧ್ಯಮ ವರ್ಗದ ಮೇಲಿರುವವರು ಟೆನ್ನಿಸ್, ಗಾಲ್ಫ್ ಹೊರತುಪಡಿಸಿ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕಾದರೆ ಪೋಷಕರ ಪಾತ್ರ ಮುಖ್ಯ, 10 ನೆಯ ವಯಸ್ಸಿನಿಂದ ಕ್ರೀಡಾ ರಂಗಕ್ಕೆ ಕಳುಹಿಸಿಕೊಡಬೇಕು ಮಾನಸಿಕವಾಗಿ , ದೈಹಿಕವಾಗಿ ಸದೃಢ ವಾಗಲು ಸಹಕರಿಯಾಗುತ್ತದೆ ಎಂದು ತಿಳಿ ಹೇಳಬೇಕು. ಓದುದವುದರಿಂದಲೇ ಸರ್ವಣಗಿಣ ಅಭಿವೃದ್ಧಿಯಾಗುತ್ತದೆ ಎಂದು ಹೇಳಿದರು.
 
 
ಕ್ರೀಡಾಪಟು ಮೋಸ ವಂಚನೆ ಮಾಡನು: 
 
ನನ್ನ ಅನುಭವದಲ್ಲಿ ಹೇಳುವುದಾದರೆ ಯಾವುದೇ ಕ್ರೀಡಾ ಪಟು ಮೋಸ, ವಂಚನೆ ಮಾಡುವುದಿಲ್ಲ 
ಆಟ, ಊಟ ನಿದ್ದೆ ಮೂರೇ ಅವನ ಮನಸ್ಸಿನಲ್ಲಿ ಇರುತ್ತದೆ ಹಾಗಾಗಿ ಬೇರೆ ಕಡೆ ಮನಸ್ಸು ಓಡುವುದಿಲ್ಲ ಎಂದರು. 
 
 
ಕ್ರೀಡೆ ಕಡ್ಡಾಟಗೊಳಿಸಿ:
 
ಪಿ. ಟಿ ಟೀಚರ್ಸ್ ಇಲ್ಲ ದಿರುವುದು ಸಮಸ್ಯೆಯಾಗಿದೆ. ನಾನು ಒಂದು ಪ್ರಪೋಸಲ್ ಸರ್ಕಾರಕ್ಕೆ ಕೊಟ್ಟಿದ್ದೆ ಒಬ್ಬ ವಿದ್ಯಾರ್ಥಿಗೆ ಒಂದು ಕ್ರೀಡೆ ಕಡ್ಡಾಯಗೊಳಿಸಿ ಎಂದು
ಹವಾಗುಣ, ಯಾವ ಕ್ರೀಡೆಗೆ ಹೆಚ್ಚು ಪ್ರೋತ್ಸಾಹವಿದೆ ಎಂದು ಆಯ್ಕೆ ಮಾಡಿಕೊಳ್ಳಬಹುದು. ಒಂದು ಕ್ರೀಡೆಗೆ 100 ಅಂಕ ಇಡಿ, 15 ರಿಂದ 20 ಕ್ರೀಡೆಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಲು ಬಿಡಿ. ಆ ವಿದ್ಯಾರ್ಥಿ 70 ರಿಂದ 80 ಅಂಕ ಗಳಿಸಿದರೆ ಸಾಕು ಎಂದರು.
 
ಸ್ವಿಮ್ಮಿಂಗ್, ಬ್ಯಾಸ್ಕೆಟ್ಬಾಲ್ , ವೊಲಿಬಾಲ್, ಫುಟ್ಬಾಲ್ ಆಟ ಇರಬಹುದು ಈ ರೀತಿ ಒಂದು ಕ್ರೀಡೆಯನ್ನು ಆಯ್ಕೆ ಮಾಡಿಕೊಂಡರೆ. 100 ರಲ್ಲಿ ಕನಿಷ್ಠ 30 ಜನರು ಕಾಲೇಜ್ ಹಂತಕ್ಕೆ ಕ್ರೀಡೆಯನ್ನು ತೆಗೆದುಕೊಂಡು ಹೋಗುತ್ತಾರೆ. 30 ಜನರಲ್ಲಿ ಕನಿಷ್ಠ ಪಕ್ಷ 15 ಜನಕ್ಕೆ ಒಲಂಪಿಕ್ ಹಂತಕ್ಕೆ ತಯಾರಿ ಮಾಡಬಹುದು. ಬೇರೆ ದೇಶದಲ್ಲಿ ಕ್ರೀಡೆಗೆ ಸಾಕಷ್ಟು ಮಹತ್ವ ಕೊಡುತ್ತಾರೆ. ಅಮೆರಿಕದಲ್ಲಿ ಕ್ರೀಡೆಯಲ್ಲಿ ತೊಡಗಿಕೊಳ್ಳುವ ವಿದ್ಯಾರ್ಥಿಗೆ 35 ರಿಂದ 50 ಸಾವಿರ ಡಾಲರ್ ವಿದ್ಯಾರ್ಥಿ ವೇತನ ನೀಡುತ್ತಾರೆ. ಕೆಲಸ ಏನು ಅಂದರೆ ಓಡುವುದರ ಜೊತೆಗೆ 3 ರಿಂದ 4 ತಾಸು ಪ್ರಾಕ್ಟಿಸ್ ಮಾಡಬೇಕು ಎಂದು ಮಾಹಿತಿ ನೀಡಿದರು.
 
 
 
ಕಾರ್ಪೊರೇಟ್ ಸಂಸ್ಥೆಗಳು ಮುಂದೆ ಬರಬೇಕು:
 
ನಮ್ಮ ರಾಷ್ಟ್ರ ಮತ್ತು  ರಾಜ್ಯದಲ್ಲಿ ತರೆಬೇತುದಾರರ ಕೊರತೆ ಎದ್ದು ಕಾಣುತ್ತಿದೆ. ನಮ್ಮ ದೇಶದಲ್ಲಿ ಕ್ರೀಡೆ ಅಂದರೆ ಜನರು ಮೂಗು ಮುರಿಯುತ್ತಾರೆ, ಏಷಿಯನ್ ಕ್ರೀಡೆಗಳು , ಒಲಂಪಿಕ್ ಬಂದಾಗ ಪದಕ ಬಂದಿಲ್ಲ ಎನ್ನುತ್ತಾರೆ. ಕ್ರೀಡೆಗೆ ಹೆಚ್ಚು ಒತ್ತು ಕೊಡಬೇಕು, ಹಣ ಬಿಡುಗಡೆ ಮಾಡಬೇಕು, ಕಾರ್ಪೊರೇಟ್ ಸಂಸ್ಥೆಗಳು ಕೂಡ ಮುಂದೆ ಬರಬೇಕು ಎಂದು ಅಭಿಪ್ರಾಯಪಟ್ಟರು.
 
ಸರ್ಕಾರ ಸಂಸ್ಥೆಗಳ ಸಾಮಾಜಿಕ ಚಟುವಟಿಕೆಗಳಲ್ಲಿ ಇಂತಿಷ್ಟು ಹಣ ತೊಡಗಿಸಿಕೊಳ್ಳಬೇಕು ಎಂದು ಸ್ಪಷ್ಟ ಸೂಚನೆ ನೀಡಬೇಕು. 30 ರಿಂದ 35 ಕ್ರೀಡೆ ದೇಶದಲ್ಲಿ ಇವೆ, ಸುಮಾರು 32 ರಷ್ಟು ಕ್ರೀಡೆಗಳು ಇಡೀ ದೇಶದಲ್ಲಿ ಇದೆ. ಇಡೀ ರಾಷ್ಟ್ರದಲ್ಲಿ ಪ್ರಮುಖ 32 ಸಂಸ್ಥೆಗಳನ್ನು ಹುಡುಕಲು ಕಷ್ಟ ಆಗುವುದಿಲ್ಲ. ಒಬ್ಬರಿಗೆ ಒಂದೊಂದು ಕ್ರೀಡೆ ದತ್ತು ತಗೆದುಳ್ಕೊಳ್ಳಬೇಕು ಎಂದು ಆದೇಶ ಹೊರಡಿಸಬೇಕು ಹೇಗಿದ್ದರೂ ಸರ್ಕಾರ ಸಂಸ್ಥೆಗಳಿಗೆ ಹಲವು ಸವಲತ್ತು ಕೊಡುತ್ತದೆ ಎಂದು ಹೇಳಿದರು.
 
ಹೀಗೆ ಮಾಡಿದರೆ ಮಾತ್ರ ಕ್ರೀಡಾಪಟುಗಳ ಸಂಖ್ಯೆ ಜಾಸ್ತಿಯಾಗುತ್ತದೆ. ಹಳ್ಳಿಗಾಡಿನ ಕ್ರೀಡಾಪಟುಗಳು ನಗರಕ್ಕೆ ಬಂದರೆ ಹೆಚ್ಚಿನ ಸವಲತ್ತು ಇರುವುದಿಲ್ಲ. ಹಾಸ್ಟೇಲ್ ಗಳು ಆಗಬೇಕು. 20 ವರ್ಷದಿಂದ ಈ ಬಗ್ಗೆ ಮನವಿ ಮಾಡುತ್ತಿದ್ದೇನೆ. ಯಾವುದೇ ಸರ್ಕಾರ ಇರಲಿ ಮುಖ್ಯಮಂತ್ರಿಗಳಿಗೆ ಕ್ರೀಡೆಯ ಬಗ್ಗೆ ಆಸಕ್ತಿ ಇರುತ್ತದೆ ಆದರೆ ಕೆಳಗಿನ ಅಧಿಕಾರಿಗಳಿಗೆ ಆಸಕ್ತಿ ಇರುವುದಿಲ್ಲ. 
ಆದರೆ ಇಲಾಖೆಗಳಿಗೆ ರೂಪು ರೇಷೆ ಕೊಟ್ಟು ಸರಿಯಾಗಿ ಕಾರ್ಯರೂಪಕ್ಕೆ ತಂದರೆ ಒಳ್ಳೆಯದಾಗುತ್ತದೆ ಎಂದು ತಿಳಿಸಿದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ