ಯೂನಿವರ್ಸಿಟಿ ಅಲ್ಲ, ಕಾಂಗ್ರೆಸ್ಸನ್ನೇ ಬಂದ್ ಮಾಡ್ಬೇಕು: ಛಲವಾದಿ ನಾರಾಯಣಸ್ವಾಮಿ

Krishnaveni K

ಬುಧವಾರ, 12 ಮಾರ್ಚ್ 2025 (17:29 IST)
ಬೆಂಗಳೂರು: ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳನ್ನು ಮುಚ್ಚುವ ಬದಲು ನಿಮ್ಮ ಕಾಂಗ್ರೆಸ್ ಪಕ್ಷವನ್ನೇ ಮುಚ್ಚಿಬಿಡಿ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಗ್ರಹಿಸಿದ್ದಾರೆ.

ಬೆಂಗಳೂರಿನ ವಿಧಾನ ಸೌಧದ ಕೆಂಗಲ್ ಹನುಮಂತಯ್ಯ ಪ್ರತಿಮೆ ಬಳಿ ಇಂದು ಬಿಜೆಪಿ-ಜೆಡಿಎಸ್ ಪಕ್ಷಗಳ ಪ್ರತಿಭಟನೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮುಚ್ಚಿಬಿಟ್ಟರೆ ದೇಶಕ್ಕೇನೂ ಆಗುವುದಿಲ್ಲ; ಕಾಂಗ್ರೆಸ್ ಇರುವವರೆಗೆ ಈ ದೇಶಕ್ಕೆ ಅಭಿವೃದ್ಧಿ, ನೆಮ್ಮದಿ ಇಲ್ಲ ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷ ದೇಶಕ್ಕೆ ಗಂಡಾಂತರ ತರುವ ಕೆಲಸ ಮಾಡುತ್ತಿದೆ. ಕಾರ್ಯಕರ್ತರಿಗೆ ಖಜಾನೆ ಹಣವನ್ನು ಕೊಡಲು ನಾವು ಬಿಡುವುದಿಲ್ಲ; ಇದನ್ನು ಸಂವಿಧಾನದ ಅಡಿಯಲ್ಲಿ ಕೊಡುತ್ತ ಇದ್ದೀರಾ? ಇದನ್ನು ಕೂಡಲೇ ನಿಲ್ಲಿಸಿ ಎಂದು ಆಗ್ರಹಿಸಿದರು.

ಗ್ಯಾರಂಟಿ ಅನುಷ್ಠಾನ ಸಮಿತಿಗಳು ಕಾನೂನುಬಾಹಿರ ಮತ್ತು ಅಸಾಂವಿಧಾನಿಕ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದರು. ಸಂವಿಧಾನದಂತೆ ಕೆಲಸ ಮಾಡುವುದು ಸರಕಾರದ ಕರ್ತವ್ಯ ಎಂದು ತಿಳಿಸಿದರು. ಅವು ಸಾಂವಿಧಾನಿಕ ಹುದ್ದೆಗಳಲ್ಲ; ಆದ್ದರಿಂದ ಕೈಬಿಡಲೇಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ಸಿನವರು ಖಜಾನೆಗೆ ಕನ್ನ ಹಾಕುತ್ತಿದ್ದಾರೆ ಎಂದು ತಿಳಿಸಿದರು. ಪ್ರತಿಯೊಂದು ವಿಷಯಕ್ಕೆ ಕೇಳಿದರೂ ಹಣ ಇಲ್ಲ ಎನ್ನುತ್ತೀರಿ. ಅಂಗನವಾಡಿ ಕಾರ್ಯಕರ್ತರಿಗೆ ಹಣ ಕೊಡುತ್ತಿಲ್ಲ; 9 ಯುನಿವರ್ಸಿಟಿ ಮುಚ್ಚುತ್ತಿದ್ದಾರೆ. ಕಾರ್ಯಕರ್ತರನ್ನು ಕಾಪಾಡಲು ಕಾಂಗ್ರೆಸ್ಸಿನಲ್ಲಿ ಹಣ ಇಲ್ಲವಾದರೆ, ಖಜಾನೆಗೆ ಕನ್ನ ಹಾಕುವುದಲ್ಲ; ಯುನಿವರ್ಸಿಟಿ ಮುಚ್ಚುವುದು ಸರಿಯಲ್ಲ ಎಂದು ಆಕ್ಷೇಪಿಸಿದರು. ದುಡ್ಡಿಲ್ಲವಾದರೆ ಕಾಂಗ್ರೆಸ್ ಕಚೇರಿಯನ್ನೇ ಮುಚ್ಚಿ ಬಿಡಿ ಎಂದು ಸಲಹೆ ನೀಡಿದರು.

ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಸರಕಾರ ದಿನಕ್ಕೊಂದು ಹಗರಣ ಮಾಡಿ ಸಿಕ್ಕಿ ಹಾಕಿಕೊಳ್ಳುತ್ತಿದೆ. ಹಗರಣ ಸಂಬಂಧ ಉತ್ತರಿಸದೆ ವಾಮಮಾರ್ಗದಿಂದ ತಪ್ಪಿಸಿಕೊಳ್ಳುತ್ತದೆ ಎಂದು ಅವರು ಟೀಕಿಸಿದರು. ರನ್ಯಾರಾವ್ ಚಿನ್ನ ಸ್ಮಗ್ಲಿಂಗ್ ಪ್ರಕರಣದಲ್ಲಿ ಪಾಲ್ಗೊಂಡ ಸಚಿವರು ಯಾರೆಂದು ಹೇಳಿ ಎಂದು ಆಗ್ರಹಿಸಿದರು. ಕಾಂಗ್ರೆಸ್ಸಿನ ದುಂಡಾವರ್ತಿ ಕಥೆಗಳನ್ನು ಮಾನ್ಯ ರಾಜ್ಯಪಾಲರ ಮುಂದೆ ಬಿಚ್ಚಿ ಹೇಳಲಿದ್ದೇವೆ ಎಂದು ಅವರು ತಿಳಿಸಿದರು.
 
 
 
 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ