ಬೆಂಗಳೂರು (ಆ.10): ಅರ್ಹ ಸಮುದಾಯಗಳಿಗೆ ಹಿಂದುಳಿದ ವರ್ಗಗಳ ಮಾನ್ಯತೆ ನೀಡುವ ಅಧಿಕಾರವನ್ನು ರಾಜ್ಯ ಸರ್ಕಾರ,ಗಳಿಗೆ ವಹಿಸುವ ಕೇಂದ್ರ ಸರ್ಕಾರದ ನಿರ್ಧಾರ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅಗ್ನಿ ಪರೀಕ್ಷೆಯಾಗಿ ಕಾಡಲಿದೆ.
ಕೇಂದ್ರ ಸರ್ಕಾರವು ಒಬಿಸಿ ಮಾನ್ಯತೆಗೆ ಸಮುದಾಯಗಳನ್ನು ಗುರುತಿಸುವ ಅಧಿಕಾರವನ್ನು ಒಬಿಸಿ ಕಾಯ್ದೆ ತಿದ್ದುಪಡಿ ಮೂಲಕ ರಾಜ್ಯಗಳಿಗೆ ನೀಡಲು ಈಗಾಗಲೇ ಸಚಿವ ಸಂಪುಟ ನಿರ್ಧಾರ ತೆಗೆದುಕೊಂಡಿದೆ. ಇದೇ ಅಧಿವೇಶನದಲ್ಲಿ ತಿದ್ದುಪಡಿ ಕಾಯ್ದೆಯನ್ನು ಮಂಡಿಸಿ ಅಂಗೀಕಾರ ಪಡೆಯಲು ಮುಂದಾಗಿದೆ. ಈಗಾಗಲೇ ಹಿಂದುಳಿದ ವರ್ಗಗಳ 2-ಎ ಮೀಸಲಾತಿಗಾಗಿ ಪಂಚಮ ಸಾಲಿ ಹಾಗೂ ಒಕ್ಕಲಿಗ ಸಮುದಾಯಗಳು ಒತ್ತಾಯ ಮಾಡಿವೆ. ಅಲ್ಲದೆ, ಮುಂದಿನ ಒಂದು ತಿಂಗಳಲ್ಲಿ ಸರ್ಕಾರ ಅಂತಿಮ ನಿರ್ಧಾರ ತೆಗೆದುಕೊಳ್ಳದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ರೂಪಿಸುವುದಾಗಿ ಪಂಚಮಸಾಲಿ ಸಮುದಾಯ ಎಚ್ಚರಿಕೆ ನೀಡಿದೆ.
ಎರಡೂ ಸಮುದಾಯಗಳನ್ನು 2-ಎ ಮೀಸಲಾತಿಗೆ ಸೇರಿಸಿದರೆ 2-ಎ ಮೀಸಲಾತಿಯಲ್ಲಿರುವ 102 ಜಾತಿಗಳ ಜೇನು ಗೂಡಿನ ಮೇಲೆ ಕಲ್ಲೆಸದಂತಾಗಲಿದೆ. ಹೀಗಾಗಿ ಬಸವರಾಜ ಬೊಮ್ಮಾಯಿ ಅವರು ಇಕ್ಕಟ್ಟಿಗೆ ಸಿಲುಕಲಿದ್ದು, ಮುಖ್ಯಮಂತ್ರಿ ಆಗಿ ಅಧಿಕಾರ ಪಡೆದ ತಕ್ಷಣ ಸವಾಲಿನ ಸ್ಥಿತಿ ಎದುರಾಗಿದೆ. ಈ ಸಂಕಷ್ಟದ ಸ್ಥಿತಿಯನ್ನು ಹೇಗೆ ನಿಭಾಯಿಸಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.
ಏನಿದು ಮೀಸಲಾತಿ ಸಮಸ್ಯೆ?: ಪಂಚಮಸಾಲಿ ಸಮುದಾಯವು ಪ್ರಸ್ತುತ ಪ್ರವರ್ಗ 3 - ಬಿ ಯಲ್ಲಿದ್ದು ಶೇ.5ರಷ್ಟುಮೀಸಲಾತಿ ಪಡೆಯುತ್ತಿದೆ. ಇದೀಗ ಸಮುದಾಯದ ಗಾತ್ರ ಆಧರಿಸಿ ಶೇ.15 ರಷ್ಟುಮೀಸಲಾತಿ ಇರುವ 2-ಎ ಮೀಸಲಾತಿಗೆ ಸೇರಿಸುವಂತೆ ಬೇಡಿಕೆ ಇಟ್ಟಿದೆ. ರಾಜ್ಯಮಟ್ಟದ ಹೋರಾಟ ರೂಪಿಸಿ ಈಗ್ಥಾಗಲೇ ಹಲವು ಹಂತದಲ್ಲಿ ಎಚ್ಚರಿಕೆ ರವಾನಿಸಿದ್ದು, ಸರ್ಕಾರಕ್ಕೆ ಆರು ತಿಂಗಳು ಗಡುವು ನೀಡಿದೆ. ಆ ಗಡುವು ಮುಂದಿನ ತಿಂಗಳಿನ ವೇಳೆಗೆ ಮುಗಿಯಲಿದೆ.