ಬೆಂಗಳೂರು (ಆ.08): ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ ಬಳಿಕ ನಡೆಸಿದ ಮೊದಲ ಸಚಿವ ಸಂಪುಟದ ಸಭೆಯಲ್ಲಿ ಪ್ರಕಟಿಸಿದ್ದ ರೈತರ ಮಕ್ಕಳ ಶಿಷ್ಯ ವೇತನ (ವಿದ್ಯಾರ್ಥಿ ವೇತನ) ಯೋಜನೆ ಕುರಿತು ರಾಜ್ಯ ಸರ್ಕಾರವು ಶನಿವಾರ ಅಧಿಕೃತ ಆದೇಶ ಹೊರಡಿಸಿದೆ.
ರೈತರ ಮಕ್ಕಳು ಕರ್ನಾಟಕ ರಾಜ್ಯದ ಅನುದಾನದಿಂದ ಪಾವತಿಸುವಂತಹ ಒಂದು ವಿದ್ಯಾರ್ಥಿ ವೇತನಕ್ಕೆ ಮಾತ್ರ ಅರ್ಹರಿರುತ್ತಾರೆ. ಆದಾಗ್ಯೂ ಮೆರಿಟ್, ಅರ್ಹತಾ ಪರೀಕ್ಷೆ, ಶೈಕ್ಷಣಿಕ ಪರೀಕ್ಷೆಗಳಲ್ಲಿ ರ್ಯಾಂಕ್ ಇತ್ಯಾದಿಗಳ ಆಧಾರದ ಮೇಲೆ ಪಡೆಯುವ ವಿದ್ಯಾರ್ಥಿವೇತನ, ಪ್ರಶಸ್ತಿ ಹಣಗಳನ್ನು (ರಿವಾರ್ಡ್) ರೈತರ ಮಕ್ಕಳು ಪಡೆದಿದ್ದರೂ ಈ ವಿದ್ಯಾರ್ಥಿವೇತನ ಪಡೆಯಲೂ ಅರ್ಹರಿರುತ್ತಾರೆ.
ಶಿಷ್ಯವೇತನವು ಶಿಕ್ಷಣದ ಯಾವುದೇ ಕೋರ್ಸ್ನ ಸೆಮಿಸ್ಟರ್, ಶೈಕ್ಷಣಿಕ ವರ್ಷಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಒಂದು ಸೆಮಿಸ್ಟರ್ನಲ್ಲಿ ಫೇಲ್ ಆಗಿ ಮತ್ತೆ ಪುನರಾವರ್ತನೆಯಾಗುವ ಸಮಯದಲ್ಲಿ ವಿದ್ಯಾರ್ಥಿ ವೇತನ ಸಿಗುವುದಿಲ್ಲ. ವಿದ್ಯಾರ್ಥಿ ವೇತನವನ್ನು ಯಾವುದಾದರೂ ಒಂದು ವಿಧದ ಕೋರ್ಸ್ಗೆ ಮಾತ್ರ ನೀಡಲಾಗುವುದು. ಉದಾ: ಒಂದು ಸ್ನಾತಕೋತ್ತರ ಪದವಿ ಪೂರೈಸಿ ಬಳಿಕ ಮತ್ತೊಂದು ಸ್ನಾತಕೋತ್ತರ ಪದವಿ ತೆಗೆದುಕೊಂಡರೆ ಎರಡನೇ ಬಾರಿ ವಿದ್ಯಾರ್ಥಿ ವೇತನ ನೀಡಲಾಗುವುದಿಲ್ಲ ಎಂದು ಕೃಷಿ ಇಲಾಖೆ ಆದೇಶದಲ್ಲಿ ತಿಳಿಸಲಾಗಿದೆ.