224 ಕ್ಷೇತ್ರದ ಪೈಕಿ ಟಿಕೆಟ್ ಗಾಗಿ ಅರ್ಜಿ ಹಾಕಿದ್ದು 10 ಮಹಿಳೆಯರು ಮಾತ್ರ..!
ಶನಿವಾರ, 4 ನವೆಂಬರ್ 2017 (16:15 IST)
ಬೆಂಗಳೂರು: ಮಹಿಳೆಯರಿಗೆ ಟಿಕೆಟ್ ನೀಡಲು ಪಕ್ಷ ಸಿದ್ಧವಿದೆ. ಆದರೆ ನೀವು ಅರ್ಜಿ ಹಾಕಿ ಟಿಕೆಟ್ ಕೇಳುವ ಧೈರ್ಯ ತೋರಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಹೇಳಿದ್ದಾರೆ.
ಅರಮನೆ ಮೈದಾನದಲ್ಲಿ ಕೆಪಿಸಿಸಿ ಮಹಿಳಾ ಘಟಕದಿಂದ ಆಯೋಜಿಸಿದ್ದ ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿದ ಅವರು, 2018ರ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರಿಗೆ ಟಿಕೆಟ್ ನೀಡಲು ಒತ್ತಡವಿದೆ. ಶೇ.33 ರಷ್ಟು ಟಿಕೆಟ್ ನೀಡಲು ಸಿದ್ಧವಿದ್ದೇವೆ. ಆದರೆ ನೀವು ಅರ್ಜಿ ಹಾಕಿ ಟಿಕೆಟ್ ಕೇಳುವ ಧೈರ್ಯ ತೋರಿಸಬೇಕು. ಕಳೆದ ಬಾರಿ 224 ಕ್ಷೇತ್ರಗಳ ಪೈಕಿ ಕೇವಲ ಹತ್ತು ಮಹಿಳೆಯರು ಮಾತ್ರ ಟಿಕೆಟ್ ಗೆ ಅರ್ಜಿ ಹಾಕಿದ್ರು. ನೀವು ಅರ್ಜಿನೇ ಹಾಕದೆ ಇದ್ರೆ ನಾವೇನು ಮಾಡಲು ಸಾಧ್ಯವಿಲ್ಲ ಎಂದರು.
ಎಸ್.ಆರ್.ಪಾಟೀಲ್ ಮಾತನಾಡಿ, ಜನಸಂಖ್ಯೆಯ ಅರ್ಧದಷ್ಟು ಇರುವ ಮಹಿಳೆಯರು ಚುನಾವಣೆಯಲ್ಲಿ ಮುಂಚೂಣಿಗೆ ಬಂದು ಮಹಿಳೆಯರ ಮತಗಳನ್ನು ಸೆಳೆಯುವ ಪ್ರಯತ್ನ ಮಾಡಬೇಕು. 2018ರ ಚುನಾವಣೆಯಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರ ತರುವಲ್ಲಿ ಶ್ರಮಿಸಬೇಕು. ಮಹಿಳೆಯರು ಈಗ ಎಲ್ಲಾ ರಂಗದಲ್ಲಿಯೂ ಮುಂಚೂಣಿಯಲ್ಲಿದ್ದಾರೆ. ಜಗತ್ತಿನ ಉಕ್ಕಿನ ಮಹಿಳೆ ಇಂದಿರಾ ಗಾಂಧಿ ನಮಗೆಲ್ಲರಿಗೂ ಸ್ಪೂರ್ತಿ ಆಗಬೇಕು. ಅಟಲ್ ಬಿಹಾರಿ ವಾಜಪೇಯಿಯವರು ಇಂದಿರಾ ಗಾಂಧಿಯನ್ನ ದುರ್ಗೆ ಎಂದು ಕರೆದರು. ಅವಕಾಶಗಳು ಒಂದು ಬಾರಿ ಮನೆ ಬಾಗಿಲಿಗೆ ಬರುತ್ತವೆ. ಆ ಸಂದರ್ಭದಲ್ಲಿ ಅವಕಾಶ ಬಳಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ಜಾರಿಗೆ ಬರುವ ದಿನಗಳು ದೂರವಿಲ್ಲ ಎಂದರು.