ಬೆಂಗಳೂರು (ಆ.17) : ರಾಜ್ಯದಲ್ಲಿ ಸರ್ಕಾರ ಬಡವರ ಪರವಾದ ಒಂದು ಕೆಲಸವನ್ನೂ ಮಾಡುತ್ತಿಲ್ಲ.
ಎರಡು ವರ್ಷದಿಂದ ಬಡವರಿಗೆ ಒಂದು ಮನೆಯನ್ನೂ ನೀಡಿಲ್ಲ. ಬಡವರ ರಕ್ತ ಹೀರುತ್ತಿರುವ ಬಿಜೆಪಿಯನ್ನು ಮೊದಲು ಅಧಿಕಾರದಿಂದ ತೊಲಗಿಸಬೇಕು ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಒಂದು ವರ್ಷ ಮಾತ್ರ ಇರಬಹುದು. ನಾವೇನೂ ಈ ಸರ್ಕಾರವನ್ನು ತೆಗೆಯುವುದಿಲ್ಲ. ಅವರಾಗಿಯೇ ಬಿದ್ದರೆ ನಾವು ಸುಮ್ಮನಿರುವುದಿಲ್ಲ ಎಂದು ಹೇಳಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಯಡಿಯೂರಪ್ಪ ದಾರಿಯಲ್ಲಿ ಸಾಗುತ್ತೇನೆ ಎನ್ನುತ್ತಾರೆ. ಯಡಿಯೂರಪ್ಪ ಅವಧಿಯಲ್ಲಿ ಅವರು ಹಾಗೂ ಅವರ ಮಗ ಲೂಟಿ ಮಾಡಿದ್ದು ಬಿಟ್ಟರೆ ಬೇರೆ ಯಾವ ಕೆಲಸವನ್ನೂ ಮಾಡಿಲ್ಲ. ನೀವೂ ಲೂಟಿ ಹೊಡೆಯುತ್ತೀರಾ? ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಲೇವಡಿ ಮಾಡಿದರು.
ವಸತಿ ಇಲಾಖೆಯಲ್ಲಿ ಒಂದು ಮನೆಯನ್ನೂ ಮಂಜೂರು ಮಾಡದ ಬಗ್ಗೆ ಕಿಡಿ ಕಾರಿದ ಅವರು, ವಸತಿ ಸಚಿವ ವಿ. ಸೋಮಣ್ಣ ಅವರು ಕೇವಲ ಸುಳ್ಳು ಹೇಳುತ್ತಾ ಬಡವರನ್ನು ವಂಚಿಸುತ್ತಿದ್ದಾರೆ. ಎರಡು ವರ್ಷದ ಅವಧಿಯಲ್ಲಿ ಒಂದು ಮನೆಯನ್ನೂ ವಿತರಣೆ ಮಾಡಿಲ್ಲ. ಈ ಸರ್ಕಾರದಲ್ಲಿ ಹಣವಿಲ್ಲವೇ ಅಥವಾ ಕಮಿಷನ್ ಬಂದಿಲ್ಲವೇ ಎಂದು ಪ್ರಶ್ನಿಸಿದರು