ಮಂಗಳೂರಿನಲ್ಲಿ ಎನ್ಐಎ ಕಚೇರಿ ಸ್ಥಾಪನೆ ಸುಳಿವು ನೀಡಿದ ಸಿಎಂ

ಶನಿವಾರ, 14 ಆಗಸ್ಟ್ 2021 (09:10 IST)
ಮಂಗಳೂರು (ಆ.14):  ರಾಷ್ಟ್ರೀಯ ತನಿಖಾದಳ (ಎನ್ಐಎ) ಕಚೇರಿಯನ್ನು ಮಂಗಳೂರಿನಲ್ಲಿ ಆರಂಭಿಸುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳೂರಿನಲ್ಲಿ ಸುಳಿವು ನೀಡಿದ್ದಾರೆ. ಎನ್ಐಎ ಕಚೇರಿ ಸ್ಥಾಪನೆ ಬಗ್ಗೆ ರಾಜ್ಯ ಗೃಹಸಚಿವರು ಶೀಘ್ರವೇ ಮಂಗಳೂರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದಿದ್ದಾರೆ.

ಎರಡು ದಿನಗಳ ಅವಿಭಜಿತ ದ.ಕ. ಜಿಲ್ಲೆ ಭೇಟಿ ಮುಕ್ತಾಯಗೊಳಿಸಿದ ಬಳಿಕ ಶುಕ್ರವಾರ ವಿಮಾನ ನಿಲ್ದಾಣಕ್ಕೆ ತೆರಳುವ ಮುನ್ನ ಮಂಗಳೂರಿನ ಸಕ್ರ್ಯೂಟ್ ಹೌಸ್ನಲ್ಲಿ ಸುದ್ದಿಗಾರರಲ್ಲಿ ಮಾತನಾಡಿದರು.
ರಾಜ್ಯ ಸರ್ಕಾರ ಓರ್ವ ದಕ್ಷ ಗೃಹಸಚಿವರನ್ನು ಹೊಂದಿದೆ. ಅಧಿಕಾರ ಸ್ವೀಕರಿಸಿದ ಬಳಿಕ ಎರಡು ಸಭೆಗಳನ್ನು ನಡೆಸಿ ವರದಿ ಪಡೆದುಕೊಂಡಿದ್ದಾರೆ. ಸದ್ಯದಲ್ಲೇ ಮಂಗಳೂರಿಗೆ ಆಗಮಿಸಿ ಇಲ್ಲಿನ ಸ್ಥಿತಿಗತಿ ಬಗ್ಗೆ ಪರಿಶೀಲಿಸಲಿದ್ದಾರೆ. ಆ ಬಳಿಕ ನಾವೆಲ್ಲರೂ ಸೇರಿ ಈ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ಎನ್ಐಎ ಕಚೇರಿ ಸ್ಥಾಪನೆ ದಿಕ್ಕಿನಲ್ಲಿ ಈಗಾಗಲೇ ಕೆಲವು ಹೆಜ್ಜೆಗಳನ್ನು ಇರಿಸಿದ್ದೇವೆ. ಆದರೆ ಇದನ್ನು ಬಹಿರಂಗಪಡಿಸಲಾಗುವುದಿಲ್ಲ, ಮುಂದಿನ ದಿನಗಳಲ್ಲಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದೇವೆ ಎಂದರು.
ಸಕ್ರ್ಯೂಟ್ ಹೌಸ್ನಲ್ಲಿ ಸುಮಾರು ಅರ್ಧ ಗಂಟೆ ಕಾಲ ಪಕ್ಷ ಮುಖಂಡರು, ಶಾಸಕರೊಂದಿಗೆ ಚರ್ಚಿಸಿದ ಬಳಿಕ ಸಿಎಂ ಬೊಮ್ಮಾಯಿ ಅವರು ವಿಮಾನ ನಿಲ್ದಾಣಕ್ಕೆ ತೆರಳಿ ಬೆಂಗಳೂರಿಗೆ ನಿರ್ಗಮಿಸಿದರು.
ಶುಕ್ರವಾರ ಕೋವಿಡ್ ಹಿನ್ನೆಲೆಯಲ್ಲಿ ಗಡಿಪ್ರದೇಶ ಭದ್ರತೆ ಪರಿಶೀಲಿಸಲು ತಲಪಾಡಿಗೆ ಭೇಟಿ ನೀಡಬೇಕಾಗಿದ್ದ ಸಿಎಂ ಅವರ ಕಾರ್ಯಕ್ರಮವನ್ನು ಗುರುವಾರವೇ ರದ್ದುಪಡಿಸಲಾಗಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ