ಸಂಪುಟ ವಿಳಂಬಕ್ಕೆ ವಿಪಕ್ಷಗಳ ಆಕ್ರೋಶ : ಕರ್ನಾಟಕಕ್ಕೆ ಅಂಟಿದ ಶಾಪ ಎಂದ HDK
ಶನಿವಾರ, 31 ಜುಲೈ 2021 (09:02 IST)
ರಾಮನಗರ/ಹುಬ್ಬಳ್ಳಿ (ಜು.31): ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕರಿಸಿದರೂ ಸಚಿವ ಸಂಪುಟ ವಿಸ್ತರಣೆ ವಿಳಂಬ ಹಾಗೂ ಸಚಿವ ಸ್ಥಾನಕ್ಕಾಗಿ ಹೆಚ್ಚುತ್ತಿರುವ ಲಾಬಿ ಕುರಿತು ಪ್ರತಿಪಕ್ಷ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
•ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ವಿಳಂಬ
•ಸಂಪುಟ ವಿಸ್ತರಣೆ ವಿಳಂಬಕ್ಕೆ ಅಸಮಾಧಾನ ಹೊರಹಾಕಿದ ವಿಪಕ್ಷಗಳು
•ಇದೊಂದು ಕರ್ನಾಟಕಕ್ಕೆ ಅಂಟಿದ ಶಾಪ ಎಂದ ಎಚ್ಡಿಕೆ
ಬಿಜೆಪಿಯಲ್ಲಿ ಸಂಪುಟ ರಚನೆ ವಿಳಂಬವಾಗುತ್ತಿರುವುದು ಕರ್ನಾಟಕಕ್ಕೆ ಅಂಟಿದ ಶಾಪ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಸಮಾಧಾನ ಹೊರಹಾಕಿದರೆ, ನೆರೆ ಹಾವಳಿಯಿಂದ ಜನ ಸಂಕಷ್ಟದಲ್ಲಿದ್ದರೂ ಯಾರೂ ಕೇಳುವವರಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.
ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕರಿಸಿ ಎರಡು ದಿನವಾದರೂ ಇನ್ನೂ ಸಚಿವ ಸಂಪುಟ ರಚನೆ ಆಗಿಲ್ಲ. ರಾಜ್ಯವು ಪ್ರವಾಹ, ಕೋವಿಡ್ನಿಂದ ಕಂಗೆಟ್ಟಿರುವ ಈ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಏಕಾಂಗಿಯಾಗಿ ಕಾರ್ಯನಿರ್ವಹಿಸಬೇಕಿದೆ. ಈ ಬಗ್ಗೆ ಈಗಾಗಲೇ ಆಕ್ಷೇಪ ವ್ಯಕ್ತಪಡಿಸಿರುವ ಪ್ರತಿಪಕ್ಷಗಳು ಇದೀಗ ಮತ್ತೊಮ್ಮೆ ಸಂಪುಟ ರಚನೆ ವಿಳಂಬ ಕುರಿತು ಕಿಡಿಕಾರಿವೆ.
ಎಚ್ಡಿಕೆ ಹೇಳಿದ್ದೇನು?: ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗಲೂ ಹಲವು ಸಮಯ ಏಕಾಂಗಿಯಾಗಿ ಕೆಲಸ ಮಾಡಿದ್ದರು. ಈಗ ಬಸವರಾಜ ಬೊಮ್ಮಾಯಿ ಅವರಿಗೂ ಅದೇ ಸ್ಥಿತಿ ಬಂದಿದೆ. ಇದು ಕನ್ನಡ ನಾಡಿನ ದುರಾದೃಷ್ಟಎಂದು ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಮನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಚಿವ ಸಂಪುಟ ರಚನೆ ಬಸವರಾಜ ಬೊಮ್ಮಾಯಿ ಪಾಲಿಗೆ ಸವಾಲಿನ ಕೆಲಸ. ಅವರು ದೆಹಲಿ ವರಿಷ್ಠರೊಂದಿಗೆ ಚರ್ಚಿಸಿ, ಬಿಜೆಪಿ ಶಾಸಕರ ಮನವೊಲಿಸಿ ಸಮಸ್ಯೆಗೆ ಅವಕಾಶ ನೀಡದಂತೆ ಆದಷ್ಟುಬೇಗ ಸಂಪುಟ ರಚನೆ ಮಾಡಲಿ. ನೆರೆ ಹಾವಳಿ ಹಾಗೂ ಕೋವಿಡ್ ನಿಯಂತ್ರಣದತ್ತ ಗಮನ ಹರಿಸಲಿ ಎಂದು ಸಲಹೆ ನೀಡಿದ್ದಾರೆ.
ಈ ಮಧ್ಯೆ, ಡಿ.ಕೆ.ಶಿವಕುಮಾರ್ ಮಾತ್ರ ನೆರೆಯಿಂದ ಜನ ಸಂಕಷ್ಟಅನುಭವಿಸುತ್ತಿದ್ದರೂ ಜನರ ಕಷ್ಟಗಳಿಗೆ ಸ್ಪಂದಿಸುವ ಕೆಲಸವೇ ಆಗುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಮುಖ್ಯಮಂತ್ರಿ ಹಾಗೂ ಬಿಜೆಪಿಯವರಿಗೆ ಜನಹಿತ ಬೇಕಾಗಿಲ್ಲ. ಬದಲಿಗೆ ಅಧಿಕಾರ ಬೇಕಾಗಿದೆ. ಬಿಜೆಪಿಯವರು ಬಹಳ ಆತುರದಲ್ಲಿದ್ದಾರೆ. ಅವರಿಗೆ ಜನಪರ ಕಾಳಜಿಯೇ ಇಲ್ಲ. ವಲಸಿಗ ಶಾಸಕರು ಸೇರಿ ಹಲವರು ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಲು ದೆಹಲಿ ಸೇರಿದ್ದಾರೆ ಎಂದು ಹುಬ್ಬಳ್ಳಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.