ನೀರಾವರಿಗೆ ನಮ್ಮ ಸರ್ಕಾರ ಆದ್ಯತೆ ನೀಡಿದೆ : ಸಿಎಂ

ಶುಕ್ರವಾರ, 23 ಡಿಸೆಂಬರ್ 2016 (11:54 IST)
ಮುಂದಿನ ವರ್ಷದ ಡಿಸೆಂಬರ್ ವೇಳೆಗೆ ವಿಜಯಪುರ ಜಿಲ್ಲೆಯ 184 ಕೆರೆಗಳನ್ನು ತುಂಬಿಸಲಾಗುವುದು. ವಿಜಯಪುರ ಜಿಲ್ಲೆ ಮಾತ್ರವಲ್ಲ, ರಾಜ್ಯದ ಎಲ್ಲೆಡೆ ಮತ್ತು ಅವಕಾಶ ಇರುವ ಕಡೆಗಳಲ್ಲಿ ಕೆರೆಗಳನ್ನು ತುಂಬುಸುವ ಯೋಜನೆಗೆ ಚಾಲನೆ ನೀಡಲಾಗಿದೆ. ಕೆರೆಗಳು ತುಂಬುವುದರಿಂದ ಅಂತರ್ಜಲದ ಮಟ್ಟವೂ ಹೆಚ್ಚಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

ಕೃಷಿ ಭಾಗ್ಯ ಮತ್ತು ಕೆರೆ ಸಂಜೀವಿನಿ ಯೋಜನೆಯನ್ನೂ ಪರಿಣಾಮಕಾರಿಯಾಗಿ ಜಾರಿಗೆ ತರಲಾಗಿದೆ. ಈ ಮೂಲಕ ರೈತರಿಗೆ ಶಕ್ತಿ ತುಂಬಿ ಆಹಾರ ಧಾನ್ಯಗಳ ಉತ್ಪಾದನೆ ಹೆಚ್ಚಾಗುವಂತೆ ಮಾಡುವುದು ಸರ್ಕಾರದ ಉದ್ದೇಶ. ಹನಿ ನೀರಾವರಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ. ನೀರು ಪೋಲಾಗಬಾರದು ಎಂಬುದು ಅದರ ಉದ್ದೇಶವಾಗಿದೆ ಎಂದರು.

ಕೃಷ್ಣಾ ಮೇಲ್ದಂಡೆ ಯೋಜನೆಯಿಂದ ಉತ್ತರ ಕರ್ನಾಟಕ ಭಾಗದ ಎಂಟು ಜಿಲ್ಲೆಗಳ ರೈತರಿಗೆ ಅನುಕೂಲವಾಗುತ್ತದೆ. ನಾನೂ ರೈತನ ಮಗನೇ. ರೈತರಿಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತೇನೆ. ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತಕ್ಕೆ 55 ಸಾವಿರ ಕೋಟಿ ಬೇಕಾಗುತ್ತದೆ. ನಮ್ಮ ಈ ಅವಧಿಯಲ್ಲಿ ಅದರ ಕಾಮಗಾರಿ ಮುಗಿಯದು. ಮುಂದೆಯೂ ನಾವೇ ಅಧಿಕಾರಕ್ಕೆ ಬರುತ್ತೇವೆ. ಆಗ ಪೂರ್ಣಗೊಳಿಸುತ್ತೇವೆ ಎಂದು ತಿಳಿಸಿದರು.

ನೀರಾವರಿಗೆ ನಮ್ಮ ಸರ್ಕಾರ ಆದ್ಯತೆ ನೀಡುತ್ತದೆ. ಹೆಚ್ಚಿನ ಅನುಕೂಲವಾಗಲಿ ಎಂಬ ಕಾರಣಕ್ಕೆ ಇದೇ ಭಾಗದವರಿಗೆ ಜಲಸಂಪನ್ಮೂಲ ಸಚಿವ ಸ್ಥಾನ ನೀಡಲಾಗಿದೆ. ಉತ್ತರ ಕರ್ನಾಟಕ ಮಾತ್ರವಲ್ಲ. ರಾಜ್ಯದ ಎಲ್ಲ ಭಾಗಗಳನ್ನು ಸಮಾನವಾಗಿ ನೋಡುತ್ತೇವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ