ಸರಕಾರದ ವಿರುದ್ಧ ಕಳಸಾ ಬಂಡೂರಿ ಹೋರಾಟಗಾರರ ಆಕ್ರೋಶ

ಸೋಮವಾರ, 3 ಡಿಸೆಂಬರ್ 2018 (19:21 IST)
ಮಹದಾಯಿ ನದಿ ನೀರು ಹಂಚಿಕೆ ವಿಚಾರದಲ್ಲಿ ನ್ಯಾಯಾಧೀಕರಣ ಈಗಾಗಲೇ ತೀರ್ಪು ನೀಡಿದೆ. ಆದರೆ ತೀರ್ಪಿನ ಪ್ರಕಾರ ಇದುವರೆಗೂ ನೀರನ್ನು ಬಳಸಿಕೊಳ್ಳಲು ಸರ್ಕಾರ ಮುಂದಾಗುತ್ತಿಲ್ಲ ಎಂದು ಕಳಸಾ ಬಂಡೂರಿ ಹೋರಾಟಗಾರರು ಕಿಡಿಕಾರಿದ್ದಾರೆ.

ಹುಬ್ಬಳ್ಳಿಯಲ್ಲಿ ಕಳಸಾ ಬಂಡೂರಿ ಹೋರಾಟಗಾರರು ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಹೋರಾಟಗಾರ ಅಮೃತ್ ಇಜಾರಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಾಗಲೇ 13 ಟಿಎಂಸಿ ನೀರು ಬಳಸಿಕೊಳ್ಳುವಂತೆ ನ್ಯಾಯಾಧಿಕರಣ ತೀರ್ಪು ನೀಡಿದೆ. ಆದರೆ ರಾಜ್ಯ ಸರ್ಕಾರ ಹಾಗೂ ಈ ಭಾಗದ ಜನಪ್ರತಿನಿಧಿಗಳು ನೀರಿನ‌ ಸದ್ಬಳಕೆಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ತೀರ್ಪು ಬಂದು ಐದು ತಿಂಗಳು ಕಳೆದರೂ ಮಹದಾಯಿ ನೀರಿನ ಬಳಕೆ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂದು ದೂರಿದರು.

ಕಳಸಾ ಬಂಡೂರಿ ನಾಲಾ ಯೋಜನೆ ಕಾಮಗಾರಿ ದಿನೇ ದಿನೇ ವಿಳಂಬವಾಗುತ್ತಿದೆ. ಕಾಮಗಾರಿ ಪೂರ್ಣಗೊಳಿಸಿ ನೀರಿನ ಸದ್ಬಳಕೆಗೆ ಮುಂದಾಗಬೇಕು. ಬೆಳಗಾವಿ ಅಧಿವೇಶನ ಆರಂಭವಾಗುವ ಮುಂಚೆಯೇ ರಾಜ್ಯ ಸರ್ಕಾರ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು. ಡಿಸೆಂಬರ್ 10 ರೊಳಗಾಗಿ ರಾಜ್ಯ ಸರ್ಕಾರ ಮಹದಾಯಿ ವಿಚಾರದಲ್ಲಿ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಇಲ್ಲವಾದಲ್ಲಿ ರಾಜ್ಯ ಸರ್ಕಾರದ ಈ ನಿರ್ಲಕ್ಷ್ಯ ವಿರೋಧಿಸಿ ಹೋರಾಟ ನಡೆಸಲಾಗುತ್ತದೆ. ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆ ವಿರುದ್ಧ ಸುವರ್ಣ ಸೌಧದ ಎದುರು ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಹೇಳಿದರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ