ಆಸ್ಪತ್ರೆಯಲ್ಲಿ ಏಕಾಏಕಿ ಆಕ್ಸಿಜನ್ ಬಂದ್!

ಭಾನುವಾರ, 28 ನವೆಂಬರ್ 2021 (16:39 IST)
ಚಿಕ್ಕಬಳ್ಳಾಪುರ : ಕೊರೊನಾ 2ನೇ ಅಲೆ ವೇಳೆ ಆಕ್ಸಿಜನ್ ಗೆ ದೇಶಾದ್ಯಂತ ಹಾಹಾಕಾರ ಎದ್ದಿದ್ದು ನಮಗೆಲ್ಲಾ ಗೊತ್ತೇ ಇದೆ.
ಆಕ್ಸಿಜನ್ ಕೊರತೆಯಿಂದ ಜನ ನರಳಾಡಿ ಸತ್ತಿದ್ದು ನೆನಪಿನಿಂದ ಮಾಸಿಲ್ಲ. ಜೀವವಾಯು ಇಲ್ಲವಾದರೆ ರೋಗಿಗಳು ಹೇಗೆ ಕ್ಷಣದಲ್ಲೇ ಶವವಾಗುತ್ತಾರೆ ಎಂಬುವುದಕ್ಕೆ ಚಾಮರಾಜನಗರ ಪ್ರಕರಣಕ್ಕಿಂತ ಸಾಕ್ಷಿ ಬೇಕಿಲ್ಲ. ಅಂತಹದ್ದೇ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆಸಿದೆ.
ಆಸ್ಪತ್ರೆ ಸಿಬ್ಬಂದಿ ಮಾಡಿದ ಎಡವಟ್ಟಿನಿಂದ ಕೆಲವೇ ಕ್ಷಣಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಉಸಿರು ಚೆಲ್ಲಿದಿದ್ದಾರೆ. ಉಪ್ಪಕುಂಟಪಲ್ಲಿ ಗ್ರಾಮದ ನಿವಾಸಿ ಗಂಗುಲಮ್ಮ (70) ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಕ್ಸಿಜನ್ ಇಲ್ಲದೆ ಮೃತಪಟ್ಟಿದ್ದಾರೆ.
ಗಂಗುಲಮ್ಮ ಉಸಿರಾಟದ ಸಮಸ್ಯೆ ಹಿನ್ನೆಲೆಯಲ್ಲಿ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದರು. ವೆಂಟಿಲೇಟ್ ನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಆಸ್ಪತ್ರೆಯಲ್ಲಿ ಏಕಾಏಕಿ ಆಕ್ಸಿಜನ್ ಆಫ್ ಆಗಿದೆ. ವೆಂಟಿಲೇಟರ್ ಸಹಾಯದಿಂದ ಉಸಿರಾಡುತ್ತಿದ್ದ ಗಂಗುಲಮ್ಮ ಉಸಿರಾಡಲು ಸಾಧ್ಯವಾಗದೆ ಮೃತಪಟ್ಟಿದ್ದಾರೆ.
ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಏನು ಇರಲಿಲ್ಲ. ಆದರೆ ನಿರ್ಲಕ್ಷ್ಯದಿಂದ ರಾತ್ರಿ 1:30ಕ್ಕೆ ಆಕ್ಸಿಜನ್ ಆಫ್ ಮಾಡಿದ್ದಾರೆ. ಇದರಿಂದ ಒಬ್ಬರ ಪ್ರಾಣವೇ ಹೋಗಿದೆ. ಗಂಗಲಮ್ಮ ಸಾವಿಗೆ ಆಸ್ಪತ್ರೆ ಸಿಬ್ಬಂದಿಯೇ ಕಾರಣ ಎಂದು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.
ವೈದ್ಯರಿಗೆ ಕುಟುಂಬಸ್ಥರ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ವೈದ್ಯಕೀಯ ಆಢಳಿತಾಧಿಕಾರಿ ಸಂತೋಷ್ ಎದುರು ಆಸ್ಪತ್ರೆ ಸಿಬ್ಬಂದಿ ವಿರುದ್ದ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದರು. ವೈದ್ಯಕೀಯ ಸಿಬ್ಬಂದಿಗಳ ವಿರುದ್ಧ ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸೂಕ್ತ ತನಿಖೆಯಿಂದ ಸಾವಿಗೆ ನಿಖರ ಕಾರಣ ತಿಳಿದು ಬರಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ