ಗಣಪತಿ ಪತ್ನಿ ಪಾವನಾಗೆ ನೋವಾಗಿದ್ದರೆ ವಿಷಾದಿಸುತ್ತೇನೆ: ಸಿಎಂ ಸಿದ್ದರಾಮಯ್ಯ

ಬುಧವಾರ, 13 ಜುಲೈ 2016 (13:14 IST)
ಮಂಗಳೂರು ಡಿವೈಎಸ್‌ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂದಿಸಿದಂತೆ ಸದನದಲ್ಲಿ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆಯಿಂದ ಗಣಪತಿ ಪತ್ನಿ ಪಾವನಾ ಅವರ ಮನಸ್ಸಿಗೆ ನೋವಾಗಿದ್ದರೆ ವಿಷಾದಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
 
ಮಂಗಳೂರು ಡಿವೈಎಸ್‌ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂದಿಸಿದಂತೆ ಮೊನ್ನೆ ಸದನದಲ್ಲಿ ಉತ್ತರಿಸಿದ ಗೃಹ ಸಚಿವ ಜಿ.ಪರಮೇಶ್ವರ್, ಗಣಪತಿ ಹಾಗೂ ಪಾವನಾ ಅವರ ದಾಪಂತ್ಯ ಜೀವನದಲ್ಲಿ ವಿರಸ ಉಂಟಾಗಿರುವ ಕಾರಣದಿಂದ ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಿಕೆ ನೀಡಿದ್ದರು.
 
ಗೃಹ ಸಚಿವ ಪರಮೇಶ್ವರ್ ಹೇಳಿಕೆಯಿಂದ ಕೆಂಡಾಮಂಡಲವಾದ ವಿಪಕ್ಷಗಳು ಹೇಳಿಕೆಯನ್ನು ಹಿಂಪಡೆಯುವಂತೆ ಆಗ್ರಹಿಸಿದ್ದವು.
 
ಡಿವೈಎಸ್‌ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ನೀಡಿದ್ದು, ಎಂ.ಕೆ.ಗಣಪತಿ ಅವರು ಆತ್ಮಹತ್ಯೆಗೂ ಮುನ್ನ ಖಾಸಗಿ ವಾಹಿನಿಗೆ ಸಂದರ್ಶನ ನೀಡಿದ್ದು, ನನಗೇನಾದ್ರೂ ಆದ್ರೆ ಮಾಜಿ ಗೃಹ ಸಚಿವ ಕೆ.ಜೆ.ಜಾರ್ಜ್ ಹಾಗೂ ಅಧಿಕಾರಿಗಳಾದ ಎಂ.ಎಂ.ಪ್ರಸಾದ್ ಮತ್ತು ಮೊಹಾಂತಿ ಅವರೇ ಕಾರಣ ಎಂದು ಹೇಳಿದ್ದರು. ಆದರೆ, ಗಣಪತಿ ಅವರು ಎಂ.ಎಂ.ಪ್ರಸಾದ್ ಅವರ ಕೈಕೆಳಗೆ ಕೆಲಸವೇ ನಿರ್ವಹಿಸಿಲ್ಲ. ಅವರು ಇವರಿಗೆ ಕಿರುಕುಳ ನೀಡಲು ಹೇಗೆ ಸಾಧ್ಯ. ಗಣಪತಿ ಅವರ ಆರೋಪ ಅಸಂಬದ್ಧ. ಸತ್ಯಕ್ಕೆ ದೂರವಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ