ಧರ್ಮಸ್ಥಳಕ್ಕೆ ಆಗಮಿಸಿದ ಪ್ರಧಾನಿ: ಮಂಜುನಾಥ ದೇವರ ದರ್ಶನ ಪಡೆಯುತ್ತಿರುವ ಮೋದಿ
ಭಾನುವಾರ, 29 ಅಕ್ಟೋಬರ್ 2017 (11:36 IST)
ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ವಿಶೇಷ ವಿಮಾನದ ಮೂಲಕ ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.
ಪ್ರಧಾನಿ ಮೋದಿಯವರಿಗೆ ಕೇಂದ್ರ ಸಚಿವರಾದ ಅನಂತ್ ಕುಮಾರ್, ಸದಾನಂದ ಗೌಡ ರೇಷ್ಮೆ ಶಾಲು, ಏಲಕ್ಕಿ ಮಾಲೆ, ಸಾಂಪ್ರದಾಯಿಕ ಮೈಸೂರು ಪೇಠ ತೊಡಿಸಿ ಸ್ವಾಗತಿಸಿದರು. ಇದೇವೇಳೆ ಸರ್ಕಾರದ ಪರವಾಗಿ ಸಚಿವ ಯು.ಟಿ.ಖಾದರ್, ಮಂಗಳೂರು ಮೇಯರ್ ಕವಿತಾ ಸನಿಲ್, ಗುಲಾಬಿ ಹೂ ನೀಡಿ ಸ್ವಾಗತ ಕೋರಿದರು.
ಮಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿದ ಮೋದಿಯವರಿಗೆ ದೇವಾಲಯದ ಅರ್ಚಕರು ಪೂರ್ಣಕುಂಭ ಸ್ವಾಗತ ನೀಡಿದರು. ಇದೇವೇಳೆ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಆತ್ಮೀಯವಾಗಿ ಬರಮಾಡಿಕೊಂಡರು. ನಂತರ ಸಾಂಪ್ರದಾಯಿಕ ಉಡುಗೆಯನ್ನು ಪ್ರಧಾನಿಯವರಿಗೆ ನೀಡಲಾಯಿತು.
ಸದ್ಯ ದೇವಾಲಯದ ಪ್ರಾಂಗಣ ಪ್ರವೇಶಿಸಿರುವ ಪ್ರಧಾನಿ, ದೇವರ ಪೂಜೆಯಲ್ಲಿ ತಲ್ಲೀನರಾಗಿದ್ದಾರೆ. ಕಾರ್ತಿಕ ಮಾಸದಲ್ಲಿ ಶಿವನ ದರ್ಶನ ಅತ್ಯಂತ ಪ್ರಾಮುಖ್ಯತೆ ಪಡೆದಿದೆ. ಈ ನಿಟ್ಟಿನಲ್ಲಿ ಧರ್ಮಸ್ಥಳದಲ್ಲಿ ನಡೆಯುವ ಮಹಾಪೂಜೆಯ ಸಂದರ್ಭಕ್ಕೆ ಪ್ರಧಾನಿ ಆಗಮಿಸಿದ್ದಾರೆ. ಈ ಮೂಲಕ ಧರ್ಮಸ್ಥಳಕ್ಕೆ ಮೊದಲು ಭೇಟಿ ನೀಡಿದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆ ಪಾತ್ರರಾದರು.
ಮೋದಿಯವರು ದೇವಾಲಯದ ಆವರಣ ಪ್ರವೇಶಿಸುತ್ತಿದ್ದಂತೆ, ಕಿಕ್ಕಿರಿದು ನೆರಿದಿದ್ದ ಜನರತ್ತ ಕೈ ಬೀಸಿದರು. ಈ ಸಂದರ್ಭದಲ್ಲಿ ಮೋದಿ ಮೋದಿ ಘೋಷ ಮೊಳಗಿತು.