ಪ್ರಧಾನಿ ಮೋದಿ ಆಗಮನಕ್ಕೆ ಕ್ಷಣಗಣನೆ… ಮಂಗಳೂರು-ಧರ್ಮಸ್ಥಳದವರೆಗೆ ಹೈ ಅಲರ್ಟ್
ಶನಿವಾರ, 28 ಅಕ್ಟೋಬರ್ 2017 (17:09 IST)
ಮಂಗಳೂರು: ಇದೇ ಮೊದಲ ಬಾರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಸಂಚರಿಸುವ ಮಂಗಳೂರು, ಬೆಳ್ತಂಗಡಿ, ಉಜಿರೆ ರಸ್ತೆಯಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಮೋದಿ ಆಗಮನಕ್ಕೂ ಮೊದಲು ನಕ್ಸಲ್ ನಿಗ್ರಹ ಪಡೆಯಿಂದ ಕೂಂಬಿಂಗ್ ಕಾರ್ಯಾಚರಣೆ ನಡೆಯುತ್ತಿದೆ. ಎಎನ್ಎಫ್ ನ 25 ತಂಡಗಳು ಕಾರ್ಯಾಚರಣೆ ನಡೆಸುತ್ತಿದ್ದು, ಹತ್ತು ಮಂದಿ ಎಸ್ಪಿ ಶ್ರೇಣಿಯ ಅಧಿಕಾರಿಗಳು, ಡಿವೈಎಸ್ಪಿ ಮತ್ತು ಪಿಎಸ್ ಐ ದರ್ಜೆಯ ಅಧಿಕಾರಿಗಳು ಸೇರಿದಂತೆ 2 ಸಾವಿರಕ್ಕೂ ಅಧಿಕ ಪೊಲೀಸರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.
ಅಲ್ಲಲ್ಲಿ ಬಾಂಬ್ ನಿಷ್ಕ್ರಿಯ ದಳ ಕೂಡಾ ತಪಾಸಣೆ ನಡೆಸುತ್ತಿದೆ. ಮೋದಿ ಪ್ರವಾಸದ ಹಿನ್ನೆಲೆಯಲ್ಲಿ ವಾಯುಪಡೆಯ ವಿಶೇಷ ವಿಮಾನದಲ್ಲಿ ಈಗಾಗಲೇ ಶಸ್ತ್ರಸಜ್ಜಿತ ಭದ್ರತಾ ಕಾರುಗಳು ಬಂದಿಳಿವೆ. ಧರ್ಮಸ್ಥಳ ಹಾಗೂ ಸಮಾರಂಭ ನಡೆಯುವ ಉಜಿರೆ ಮತ್ತು ಹೆಲಿಪ್ಯಾಡ್ ನಲ್ಲಿ ವಿಶೇಷ ಭದ್ರತಾ ಪಡೆ ನಿಯೋಜಿಸಲಾಗಿದ್ದು, ತಪಾಸಣಾ ಕಾರ್ಯ ಮುಂದುವರೆದಿದೆ.
ತುಳುನಾಡ ಸಂಪ್ರದಾಯದಂತೆ ಧರ್ಮಸ್ಥಳವನ್ನು ಸುಂದರವಾಗಿ ಅಲಂಕರಿಸಲಾಗಿದೆ. ಭದ್ರತಾ ದೃಷ್ಟಿಯಿಂದ ಇಂದಿನಿಂದ ನಾಳೆ ಮಧ್ಯಾಹ್ನ 2 ಗಂಟೆವರೆಗೆ ಭಕ್ತರಿಗೆ ಮಂಜುನಾಥ ದೇವರ ದರ್ಶನ ನಿರ್ಬಂಧಿಸಲಾಗಿದೆ. ಧರ್ಮಸ್ಥಳದಲ್ಲಿ ನಿರ್ಮಿಸಲಾಗಿರುವ ಹೆಲಿಪ್ಯಾಡ್ ನಲ್ಲಿ ವಾಯುಸೇನಾ ಅಧಿಕಾರಿಗಳಿಂದ ಟ್ರಯಲ್ ರನ್ ಸಹ ಮಾಡಲಾಗಿದೆ.
ಮೋದಿಯವರು ಉಜಿರೆಯ ಶ್ರೀ ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹನ್ನೆರಡು ಲಕ್ಷ ಸ್ವಸಹಾಯ ಸಂಘದ ಸದಸ್ಯರಿಗೆ ರುಪೇ ಕಾರ್ಡ್ ವಿತರಿಸಿ, ತಂತ್ರಾಂಶ ಆಧರಿತ ಸ್ವಸಹಾಯ ಸಂಘ ನಿರ್ವಹಣೆ ಒಪ್ಪಂದ ವಿನಿಮಯ ಮತ್ತು ಭೂಮಿತಾಯಿಯನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ವರ್ಗಾಯಿಸುವ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.