ಉಗ್ರರ ದಾಳಿ: ಪ್ರಧಾನಿ ಮೋದಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ

ಸೋಮವಾರ, 19 ಸೆಪ್ಟಂಬರ್ 2016 (14:12 IST)
ಉತ್ತರ ಕಾಶ್ಮಿರದ ಉರಿ ಪಟ್ಟಣದ ಸೇನಾ ಕಚೇರಿ ಮೇಲೆ ನಡೆದ ಉಗ್ರರ ದಾಳಿ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಇಂದು ಉನ್ನತ ಮಟ್ಟದ ಸಭೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಪ್ರಧಾನಿ ಕಚೇರಿಯ ಮೂಲಗಳು ತಿಳಿಸಿವೆ.
 
ಸಭೆಯಲ್ಲಿ ಗೃಹ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, ವಿತ್ತ ಸಚಿವ ಅರುಣ್ ಜೇಟ್ಲಿ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಸೇನಾ ಮುಖ್ಯಸ್ಥ ದಲಬೀರ್ ಸಿಂಗ್ ಸೇರಿದಂತೆ ಹಿರಿಯ ಸರಕಾರ ಅಧಿಕಾರಿಗಳು ಪಾಲ್ಗೊಂಡಿದ್ದಾರೆ.
 
ಉರಿ ಪಟ್ಟಣದಲ್ಲಿ ನಡೆದ ಉಗ್ರರ ದಾಳಿ ಕುರಿತಂತೆ ಕಾಶ್ಮಿರ ಕಣೆವೆಯಲ್ಲಿ ಹಿಂಸಾಚಾರದಲ್ಲಿ ಹೆಚ್ಚಳವಾದ ಬಗ್ಗೆ ಹಿರಿಯ ಅಧಿಕಾರಿಗಳು ಪ್ರಧಾನಿಗೆ ಮಾಹಿತಿ ನೀಡಿದರು.
 
ಕೇಂದ್ರ ರಕ್ಷಣಾ ಖಾತೆ ಸಚಿವ ಮನೋಹರ್ ಪರಿಕ್ಕರ್ ಮತ್ತು ಸೇನಾ ಮುಖ್ಯಸ್ಥ ದಲಬೀರ್ ಸಿಂಗ್ ನಿನ್ನೆ ಕಾಶ್ಮಿರಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಪಾಕಿಸ್ತಾನದ ಉಗ್ರಗಾಮಿ ಸಂಘಟನೆಯಾದ ಜೈಷ್-ಎ-ಮೊಹಮ್ಮದ್ ಬೆಂಬಲಿತ ಉಗ್ರರು ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳೊಂದಿಗೆ ಸೇನಾ ಕಚೇರಿಗೆ ನುಗ್ಗಿ ದಾಳಿ ನಡೆಸಿದಾಗ 17 ಯೋಧರು ಸಾವನ್ನಪ್ಪಿದ್ದರು.
 
ಉಗ್ರರ ದಾಳಿ ಇದೊಂದು ಹೇಡಿಗಳ ಕೃತ್ಯ ಎಂದು ತೀವ್ರವಾಗಿ ಖಂಡಿಸಿದ ಪ್ರಧಾನಿ ಮೋದಿ, ಉಗ್ರರ ದಾಳಿಯ ಹಿಂದಿನ ಶಕ್ತಿಗಳಿಗೆ ತಕ್ಕ ಶಿಕ್ಷೆಯಾಗಲಿದೆ ಎಂದು ಗುಡುಗಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ