ಎರಡನೇ ಸರ್ಜಿಕಲ್ ಸ್ಟ್ರೈಕ್‌ಗೆ ಮುಂದಾದ ಪ್ರಧಾನಿ ಮೋದಿ: ಚೌಹಾಣ್

ಶುಕ್ರವಾರ, 30 ಡಿಸೆಂಬರ್ 2016 (14:50 IST)
ದೇಶದ ಮೇಲೆ ಎರಡನೇ ಸರ್ಜಿಕಲ್ ಸ್ಟ್ರೈಕ್ ನಡೆಸಲು ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದಾರೆ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ಟೀಕಿಸಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 50 ದಿನಗಳ ಹಿಂದೆ ನೋಟ್ ಬ್ಯಾನ್ ಮಾಡುವ ಮೂಲಕ ಪ್ರಧಾನಿ ಮೋದಿ ದೇಶದ ಮೇಲೆ ಮೊದಲ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದರು. ನಾಳೆ ದೇಶವನ್ನುದ್ದೇಶಿಸಿ ಮಾತನಾಡಲಿರುವ ಪ್ರಧಾನಿ ಮೋದಿ ಎರಡನೇ ಸರ್ಜಿಕಲ್ ಸ್ಟ್ರೈಕ್‌ಗೆ ಮುಂದಾಗಿದ್ದಾರೆ ಎಂದರು.
 
ಗರಿಷ್ಠ ಮೊತ್ತದ ನೋಟು ನಿಷೇಧದಿಂದ ಕಪ್ಪು ಹಣ ಹಾಗೂ ಉಗ್ರವಾದ ನಿಯಂತ್ರಿಸಬಹುದು ಎಂದು ಪ್ರಧಾನಿ ಹೇಳಿದ್ದರು. ಆದರೆ, ನೋಟು ನಿಷೇಧವಾದ ನಂತರ ಉಗ್ರವಾದ ನಿಯಂತ್ರಣಗೊಂಡಿದ್ಯಾ? ಎಂದು ಕೇಂದ್ರ ಸರಕಾರವನ್ನು ಪ್ರಶ್ನಿಸಿದರು. 
 
ದೇಶದ ಅರ್ಥವ್ಯವಸ್ಥೆಯ ದಿಕ್ಕು ತಪ್ಪಲು ಪ್ರಧಾನಿ ನರೇಂದ್ರ ಮೋದಿಯೇ ನೇರ ಕಾರಣ. ಕ್ಯಾಷ್ ಲೇಸ್ ಇಂಡಿಯಾ ಮಾಡುತ್ತೇವೆ ಎಂದು ಹೇಳುತ್ತಿದ್ದೀರಿ. ಇನ್ನೂ ಕೆಲವು ಹಳ್ಳಿಗಳಿಗೆ ಸಂಪರ್ಕವೆ ಕಲ್ಪಿಸಿಲ್ಲ. ಇಂತದರಲ್ಲಿ ಭಾರತದಂತಹ ದೇಶದಲ್ಲಿ ಕ್ಯಾಷ್ ಲೇಸ್ ವ್ಯವಹಾರ ಸಾಧ್ಯವೇ? ಎಂದು ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
 
ನೋಟು ನಿಷೇಧ ನಿರ್ಧಾರದಿಂದ ಕೇವಲ 6 ಪ್ರತಿಶತ ಕಪ್ಪು ಹಣ ಮಾತ್ರ ನಿಯಂತ್ರಣಗೊಂಡಿದೆ. ಈಗಾಗಲೇ ದೇಶದಲ್ಲಿರುವ ಕಪ್ಪು ಹಣ ಬಿಳಿಯಾಗಿ ಪರಿವರ್ತನೆಗೊಂಡಿದೆ. ಬ್ಲ್ಯಾಕ್ ಆಂಡ್ ವೈಟ್ ದಂಧೆಯಲ್ಲಿ ಬಿಜೆಪಿ ನಾಯಕರು ಪಾಲ್ಗೊಂಡಿದ್ದಾರೆ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ಆರೋಪಿಸಿದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ