`ಪರ್ ಡ್ರಾಪ್ ಮೋರ್ ಕ್ರಾಪ್’ ಜಾರಿಗೊಳಿಸೋಣ: ಪ್ರಧಾನಿ ಮೋದಿ
ಭಾನುವಾರ, 29 ಅಕ್ಟೋಬರ್ 2017 (13:07 IST)
ಧರ್ಮಸ್ಥಳ: ಪ್ರಧಾನಿ ನರೇಂದ್ರ ಮೋದಿ ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥ ದೇವರ ದರ್ಶನ ಪಡೆದು ಇದೀಗ ಉಜಿರೆಯ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.
ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಉದ್ಯೋಗ ಮಾಡುವ ಮಹಿಳೆಯರಿಗೆ ರುಪೆ ಕಾರ್ಡ್ ವಿತರಿಸಿ ಮಾತನಾಡಿದ ಪ್ರಧಾನಿ ಮೋದಿ, ನಮೋ ಮಂಜುನಾಥ ಎಂದು ಭಾಷಣ ಆರಂಭಿಸಿದ ಪ್ರಧಾನಿ ಮೋದಿ, ಕನ್ನಡದಲ್ಲಿ `ನನ್ನ ಪ್ರೀತಿಯ ಬಂಧು-ಭಗಿನಿಯರೆ ನಿಮಗೆಲ್ಲ ನನ್ನ ನಮಸ್ಕಾರಗಳು. ನನ್ನ ಪ್ರೀತಿಯ ಸೋದರಿಯರಿಗೆ ವಿಶೇಷ ಅಭಿನಂದನೆಗಳು ಎಂದರು.
ಮಂಜುನಾಥನ ದರ್ಶನ ಪಡೆಯುವ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ. ಅದರ ಜತೆ ನಿಮ್ಮ ಭೇಟಿಯಾಗುವ ಅವಕಾಶ ಸಿಕ್ಕಿದೆ. ಕಳೆದ ವಾರ ಆದಿ ಶಂಕರಾಚಾರ್ಯರು ಸ್ಥಾಪಿಸಿದ ಕೇದಾರನಾಥ ದರ್ಶನ ಪಡೆದೆ. ಇಂದು ದಕ್ಷಿಣದ ಮಂಜುನಾಥನ ದರ್ಶನ ಪಡೆದೆ ಎಂದರು.
ವೀರೇಂದ್ರ ಹೆಗ್ಗಡೆ ಸಾಧನೆಗಳ ಬಗ್ಗೆ ಶ್ಲಾಘನೆ ಮಾಡಿದ ಪ್ರಧಾನಿ, 50 ವರ್ಷ ಸಮಾಜದ ಹಿತಕ್ಕಾಗಿ ಹೆಗಡೆಯವರು ದುಡಿದಿದ್ದಾರೆ. ಕೇಂದ್ರ ಸರ್ಕಾರದ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಕ್ಕೆ ಹೆಗಡೆಯವರೇ ಪ್ರೇರಣೆ. ಸಣ್ಣ ವಯಸ್ಸಿನಿಂದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ನಿಮ್ಮ ಸಾಧನೆ ನಮ್ಮೆಲ್ಲರಿಗೂ ಪ್ರೇರಣೆಯ ವಿಷಯ. ತತ್ವವನ್ನೇ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಅಳವಡಿಸಿಕೊಂಡಿದ್ದಾರೆ. ಭಗವದ್ಗೀತೆ ನಿಷ್ಕಾಮಕರ್ಮ ಯೋಗಕ್ಕೆ ನೀವು ಸಾಕ್ಷಿ. ಹೆಗ್ಗಡೆಯವರು ಮಹಾನ್ ತಪಸ್ವಿ. ಅವರ ಎದುರು ನಾನು ಬಹಳ ಚಿಕ್ಕವನು. ಆದರೆ ಜನ ಪ್ರಧಾನಿ ಸ್ಥಾನದಲ್ಲಿ ನನ್ನನ್ನು ಕೂರಿಸಿದ್ದಾರೆ. ಹೀಗಾಗಿ ದೇಶದ ಜನರ ಪರವಾಗಿ ಅವರನ್ನು ಸನ್ಮಾನಿಸಿದ್ದೇನೆ. ಸಾಮಾನ್ಯ ವ್ಯಕ್ತಿಯಾದ ನನಗೆ ಸನ್ಮಾನ ಮಾಡುವ ಅಗತ್ಯವಿರಲಿಲ್ಲ ಎಂದರು.
ರಾಷ್ಟ್ರವನ್ನು ಡಿಜಿಟಲ್ ಮಾಡುವತ್ತ ಹೆಜ್ಜೆಯಿಡುತ್ತಿದ್ದೇವೆ. ಇಡೀ ಭಾರತವನ್ನು ಕ್ಯಾಶ್ ಲೆಸ್ ಮಾಡುತ್ತಿದ್ದೇವೆ. ಮಹಿಳಾ ಫಲಾನಿಭಾವಿಗಳಿಗೆ ರುಪೆ ಕಾರ್ಡ್ ವಿತರಿಸಿದ್ದು ಸಂತಸ ತಂದಿದೆ. ಸಮಾಜದಲ್ಲಿ ಸಾಕಷ್ಟು ಒಳ್ಳೆಯ ಸಂಗತಿಗಳಿವೆ. ಅವನ್ನು ಇನ್ನಷ್ಟು ಉತ್ತಮಗೊಳಿಸುವ ಅವಕಾಶವಿದೆ. ಕುಟುಂಬದ ಎಲ್ಲಾ ಸದಸ್ಯರು ಆರ್ಥಿಕ ಸ್ಥಿತಿಗತಿ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ. 21ನೇ ಶತಮಾನದಲ್ಲಿ ಕೌಶಲ್ಯ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದರು.
ಧರ್ಮಸ್ಥಳದಿಂದ ಸಾಕಷ್ಟು ಆಂದೋಲನಗಳು ಪ್ರಾರಂಭವಾಗಿವೆ. ವಿಶ್ವದಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಹನಿ ನೀರನ್ನು ಹೇಗೆ ಬಳಸಬೇಕು ಎಂಬುದನ್ನು ಯೋಚಿಸೋಣ. ಭೂ ಮಾತೆಯ ಬಗ್ಗೆ ನಮಗೆ ಕಿಂಚಿತ್ತೂ ಕಾಳಜಿಯಿಲ್ಲ. ಭೂಮಾತೆಯ ಸಾರವನ್ನು ಹಾಳು ಮಾಡುತ್ತಿದ್ದೇವೆ. ಹನಿನೀರನ್ನು ಸರಿಯಾಗಿ ಬಳಸುವ ಪಣತೊಡೋಣ. ಹೀಗಾಗಿ ಧರ್ಮಾಧಿಕಾರಿ ನೇತೃತ್ವದಲ್ಲಿ ಪಣತೊಡೋಣ. 2022ರ ವೇಳೆಗೆ ಯೂರಿಯಾ ಬಳಕೆ ಅರ್ಧಕ್ಕೆ ಇಳಿಸೋಣ. `ಪರ್ ಡ್ರಾಪ್ ಮೋರ್ ಕ್ರಾಪ್’ ಜಾರಿಗೊಳಿಸೋಣ ಎಂದರು.
ಇದೇ ಸಂದರ್ಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಕಂಬಳ ಕುರುಹು ನೊಗದ ಮಾದರಿ ನೀಡಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಕೇಂದ್ರ ಸಚಿವರಾದ ಅನಂತ್ ಕುಮಾರ್, ಸದಾನಂದ ಗೌಡ, ಬೆಳ್ತಂಗಡಿ ಕಾಂಗ್ರೆಸ್ ಶಾಸಕ ವಸಂತ ಬಂಗೇರಾ ಹಾಜರಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ಕಾರ್ಯಕ್ರಮಕ್ಕೆ ಗೈರಾಗಿದ್ದರು.