ಮಂಗಳೂರು: ಪೊಲೀಸರು ತಮ್ಮ ಮೇಲೆ ತೀವ್ರ ದೌರ್ಜನ್ಯ ಎಸಗುತ್ತಿದ್ದಾರೆ ಮತ್ತು ರಾಜಕೀಯ ಕಾರಣಗಳಿಗಾಗಿ ತಮ್ಮನ್ನು ಗುರಿಯಾಗಿಸುತ್ತಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.
ತಾವು ನೀಡಿದ ದೂರಿನಲ್ಲಿ ತಮ್ಮ ಮತ್ತು ತಮ್ಮ ಬೆಂಬಲಿಗರ ಮೇಲೆ ದಾಖಲಾಗಿರುವ ಎಲ್ಲಾ ಎಫ್‌ಐಆರ್‌ಗಳ ಬಗ್ಗೆ ಸ್ವತಂತ್ರ ತನಿಖೆ ನಡೆಸುವಂತೆ ಅವರು ಕೋರಿದ್ದಾರೆ. ಪೊಲೀಸರು ರಾಜಕೀಯ ಒತ್ತಡಕ್ಕೆ ಮಣಿದು ಸುಳ್ಳು ಪ್ರಕರಣಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕಳೆದ 13 ವರ್ಷಗಳಿಂದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ನ್ಯಾಯಕ್ಕಾಗಿ ಹೋರಾಡುತ್ತಿರುವುದೇ ಈ ಕಿರುಕುಳಕ್ಕೆ ಕಾರಣ. ತಾವು ನೀಡಿದ ಹೇಳಿಕೆಯನ್ನೇ ಮುಂದಿಟ್ಟುಕೊಂಡು, ತಮ್ಮ ಮೇಲೆ ಪ್ರಕರಣಗಳ ಸರಮಾಲೆ ಆರಂಭವಾಯಿತು ಎಂದು ದೂರಿನಲ್ಲಿ ಹೇಳಿದ್ದಾರೆ.
ಬಿಜೆಪಿ ನಾಯಕ ಬಿ.ಎಲ್. ಸಂತೋಷ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದೇನೆಂದು ನನ್ನ ಮೇಲೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಯಿತು. ವಿಚಾರಣೆಗೆ ಹಾಜರಾಗಲು 15 ದಿನಗಳ ಕಾಲಾವಕಾಶ ಕೇಳಿದ್ದರೂ, ಉತ್ತರ ನೀಡದೆ ಆಗಸ್ಟ್ 21 ರಂದು ಏಳು ಪೊಲೀಸ್ ಜೀಪ್‌ಗಳು ಮತ್ತು ಎರಡು ವ್ಯಾನ್‌ಗಳಲ್ಲಿ ಹಿರಿಯ ಅಧಿಕಾರಿಗಳು ತಮ್ಮ ಮನೆಗೆ ಬಂದಿದ್ದರು. ಇದು ಸಾರ್ವಜನಿಕವಾಗಿ ತಮಗೆ ಅವಮಾನ ಮಾಡುವ ಉದ್ದೇಶದಿಂದ ನಡೆಸಿದ ದಾಳಿಯಾಗಿತ್ತು ಎಂದು ಅವರು ಆರೋಪಿಸಿದ್ದಾರೆ.
ತಮ್ಮ ಬೆಂಬಲಿಗರು ಹೆಚ್ಚಾಗಿ ದಿನಗೂಲಿ ಕಾರ್ಮಿಕರಾಗಿದ್ದು, ಅವರ ಮೇಲೆ ಸುಳ್ಳು ಕೇಸುಗಳನ್ನು ಹಾಕಿ ಕೋರ್ಟಿಗೆ ಅಲೆದಾಡುವಂತೆ ಮಾಡಿ ಅವರಿಗೆ ತೊಂದರೆ ಕೊಡಲಾಗುತ್ತಿದೆ. ತಮ್ಮ ಮೇಲೆ ಕೋಮು ಗಲಭೆಯ ಸುಳ್ಳು ಆರೋಪ ಹೊರಿಸಿ, ದಕ್ಷಿಣ ಕನ್ನಡ ಜಿಲ್ಲೆಯಿಂದಲೇ ಗಡಿಪಾರು ಮಾಡಲು ಸಹ ಪ್ರಯತ್ನ ನಡೆಯುತ್ತಿದೆ ಎಂದು ತಿಮರೋಡಿ ಆರೋಪಿಸಿದ್ದಾರೆ.