ಗಾಂಜಾ ಅಕ್ರಮವಾಗಿ ಸಾಗಿಸುತ್ತಿದ್ದ ಕುಖ್ಯಾತ ಪ್ರಮುಖ ಡೀಲರ್ ಮೇಲೆ ಪೊಲೀಸ್ ಫೈರಿಂಗ್ ನಡೆದಿದೆ.
ಆನೇಕಲ್ ಸುತ್ತ ಮುತ್ತ ಅನೇಕ ವರ್ಷಗಳಿಂದ ವ್ಯಾಪಕವಾಗಿ ಗಾಂಜಾ ಸರಬರಾಜಾಗುತ್ತಿದ್ದು ಬೆಂಗಳೂರು ಗ್ರಾಮಾಂತರ ಎಸ್ಪಿಯಾಗಿ ರವಿ ಚೆನ್ನಣ್ಣನವರ್ ಕಾಲಿಟ್ಟ ಮೇಲೆ ಗಾಂಜಾ ಜಾಲದ ಮೇಲೆ ಕಣ್ಣಿಟ್ಟು ಜಾಲವನ್ನು ಭೇದಿಸ ತೊಡಗಿದ್ರು. ಇದೀಗ ಈ ಜಾಲದ ಮತ್ತೊಬ್ಬ ಪ್ರಮುಖ ಆರೋಪಿಯನ್ನು ಪೊಲೀಸರು ಗುಂಡಿನ ದಾಳಿ ನಡೆಸಿ ಬಂಧಿಸಿದ್ದಾರೆ.
ಮೂಲತಃ ಆಂಧ್ರದ ನೆಲ್ಲೂರಿನವನಾದ ಡೇವಿಡ್ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗಾಂಜಾ ಜಾಲದ ಕಿಂಗ್ ಪಿನ್. ಗಾಂಜಾ ತರುತ್ತಿದ್ದನೆಂದು ಮಾಹಿತಿ ಪಡೆದ ಆನೇಕಲ್ ತಾಲೂಕಿನ ಸೂರ್ಯಸಿಟಿ ಪೊಲೀಸರು, ಮರಸುರು ಮಡಿವಾಳ ಬಳಿ ಈತನ ಸ್ಕಾರ್ಪಿಯೋ ಕಾರನ್ನು ಅಡ್ಡಗಟ್ಟಿದ್ದಾರೆ. ಈ ವೇಳೆ ಪೊಲೀಸರ ಮೇಲೆ ದಾಳಿ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಹನುಮಯ್ಯ ಎಂಬ ಪೇದೆ ಗಾಯಗೊಂಡರು.
ಪೊಲೀಸರು ಮೊದಲು ಡೇವಿಡ್'ಗೆ ಶರಣಾಗುವಂತೆ ತಿಳಿಸಿ ಗಾಳಿಯಲ್ಲಿ ಗುಂಡು ಹಾರಿಸಿದರು. ಪೊಲೀಸರ ಮಾತು ಕೇಳದೆ ಮತ್ತೆ ದಾಳಿಗೆ ಮುಂದಾಗುತ್ತಿದ್ದಂತೆ ಆರೋಪಿ ಡೇವಿಡ್'ಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ಕಾರಿನಲ್ಲಿದ್ದ ಸುಮಾರು 800 ಕೆಜಿಗೂ ಹೆಚ್ಚು ಗಾಂಜಾ ವಶಕ್ಕೆ ಪಡೆದಿದ್ದಾರೆ.