ಬೆಂಗಳೂರು: ತಮ್ಮ ಬಗ್ಗೆ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಕ್ಕೆ ಪೊಲೀಸ್ ಬಾತ್ಮೀದಾರನನ್ನು ಬೆತ್ತಲೆಗೊಳಿಸಿ ರೌಡಿ ಶೀಟರ್ ಒಬ್ಬ ಮನಸೋ ಇಚ್ಛೆ ಥಳಿಸಿದ ಘಟನೆ ನಡೆದಿದೆ.
ರೌಡಿ ಶೀಟರ್ ಪವನ್, ಆತನ ಸಹಚರರು ಈ ರೀತಿ ಪೊಲೀಸ್ ಬಾತ್ಮೀದಾರನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಕಾಮಾಕ್ಷಿ ಪಾಳ್ಯದಲ್ಲಿ ಠಾಣೆಯಲ್ಲಿ ಕೇಸು ದಾಖಲಾಗಿದೆ. ಹಲ್ಲೆ ನಡೆಸಿದ ವಿಡಿಯೋವನ್ನು ರೌಡಿ ಪವನ್ ಸಹಚರರೇ ವಿಡಿಯೋ ಬಹಿರಂಗ ಪಡಿಸಿದ್ದಾರೆ.
ಅರ್ಜುನ್ ಎಂಬ ಯುವಕ ಪೊಲೀಸ್ ಇನ್ ಫಾರ್ಮರ್ ಆಗಿ ಕೆಲಸ ಮಾಡುತ್ತಿದ್ದ. ಈತ ತಮ್ಮ ವಿರುದ್ಧ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎಂದು ರೌಡಿಗಳು ಆತನನ್ನು ಸಾರ್ವಜನಿಕವಾಗಿ ಬೆತ್ತಲೆಗೊಳಿಸಿ ಮನಸೋ ಇಚ್ಛೆ ಥಳಿಸಿ ವಿಡಿಯೋ ಹರಿಯಬಿಟ್ಟಿದ್ದಾರೆ. ರೌಡಿ ಶೀಟರ್ ಗಳಿಂದ ರಕ್ಷಿಸಿಕೊಳ್ಳಲು ಬೆತ್ತಲಾಗಿಯೇ ಆತ ನಡು ರಸ್ತೆಯಲ್ಲಿ ಓಡಿ ಹೋಗಿದ್ದಾನೆ.
ಅರ್ಜುನ್ ಕಾಮಾಕ್ಷಿ ಪಾಳ್ಯ ಪೊಲೀಸರ ಬಾತ್ಮೀದಾರನಾಗಿದ್ದ. ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ರೌಡಿ ಪವನ್ ಮರಳಿ ಕೋರ್ಟ್ ಗೆ ಶರಣಾಗದೇ ತಲೆಮರೆಸಿಕೊಂಡಿದ್ದ. ಈತನ ಬಗ್ಗೆ ಅರ್ಜುನ್ ಪೊಲೀಸರಿಗೆ ಮಾಹಿತಿ ನೀಡಿದ್ದ. ಈತನ ಬಗ್ಗೆ ಸ್ಥಳೀಯರು ಪೊಲೀಸರಿಗೆ ದೂರು ಕೊಟ್ಟರೂ ಕ್ರಮ ಕೈಗೊಂಡಿರಲಿಲ್ಲ ಎಂದು ತಿಳಿದುಬಂದಿದೆ.