ಪೊಲೀಸ್ ಪ್ರತಿಭಟನೆ: ಶಿಸ್ತು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಗ್ಯಾರೆಂಟಿ ಎಂದ ಸಿಎಂ

ಮಂಗಳವಾರ, 31 ಮೇ 2016 (19:34 IST)
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಜೂನ್ 4 ರಂದು, ರಾಜ್ಯಾದ್ಯಂತ ಪೊಲೀಸರು ಕೈಗೊಂಡಿರುವ ಸಾಮೂಹಿಕ ಪ್ರತಿಭಟನೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗೃಹ ಕಛೇರಿಯಲ್ಲಿ ಮಹತ್ವದ ಸಭೆ ನಡೆಯಿತು.
 
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಗೃಹ ಸಚಿವ ಜಿ.ಪರಮೇಶ್ವರ್ ಸೇರಿದಂತೆ ಡಿಜಿ-ಐಜಿಪಿ, ಬೆಂಗಳೂರು ನಗರ ಪೊಲೀಸ್ ಆಯುಕ್ತರು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿದ್ದರು.
 
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾನ್ಯತೆಯೇ ಪಡೆಯದ ಸಂಘಟನೆ ರಾಜ್ಯದ್ಯಂತ ಪೊಲೀಸ ಪ್ರತಿಭಟನೆಗೆ ಕರೆ ನೀಡಿದೆ. ಪೊಲೀಸ್ ಇಲಾಖೆ ಶಿಸ್ತಿನ ಇಲಾಖೆ. ಸಾರ್ವಜನಿಕರ ಆಸ್ತಿ, ಮಾನ, ಪ್ರಾಣ ಕಾಪಾಡುವಂತಹ ಮಹತ್ವದ ಜವಾಬ್ದಾರಿ ಇರುವಂತಹ ಇಲಾಖೆ. ಇಂತಹ ಶಿಸ್ತಿನ ಇಲಾಖೆ ಅಶಿಸ್ತಿನಿಂದ ವರ್ತಿಸಬಾರದು ಎಂದು ಸಲಹೆ ನೀಡಿದರು.
 
ಇಲಾಖೆಯಲ್ಲಿ ಪ್ರತಿಭಟನೆಗೆ ಚಳುವಳಿಗೆ ಅವಕಾಶವಿಲ್ಲ. ಬಿಜೆಪಿ ಮುಖಂಡರು ಹಿಂದೆ ಸರಕಾರ ನಡೆಸಿದವರಾಗಿದ್ದರೂ ಪ್ರತಿಭಟನೆಗೆ ಪ್ರಚೋದನೆ ನೀಡುತ್ತಿರುವುದು ಸರಿಯಲ್ಲ. ಪ್ರಚೋದನೆ ನೀಡುವವರು ಯಾರೇ ಆಗಿರಲಿ ಅವರ ವಿರುದ್ಧ ಕಠಿಣ ಕ್ರಮ ಖಚಿತ ಎಂದು ಗುಡುಗಿದ್ದಾರೆ.
 
ಸೂಕ್ತ ಸಮಯದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದು ಖಚಿತ. ಸಮಸ್ಯೆಗಳಿದ್ದರೆ ಸರಕಾರದೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವುದು ಸೂಕ್ತ. ಸರಕಾರ ಪೊಲೀಸರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಮುಕ್ತ ಮನಸ್ಸು ಹೊಂದಿದೆ ಎಂದು ತಿಳಿಸಿದ್ದಾರೆ. 
 
ಒಂದು ವೇಳೆ, ರಾಜ್ಯ ಪೊಲೀಸರು ಸಾಮೂಹಿಕ ರಜೆ ಹಾಕುವ ಮೂಲಕ ಜೂನ್ 4 ರಂದು ಪ್ರತಿಭಟನೆ ಕೈಕೊಂಡರೆ, ಅಂತವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ವೆಬ್ದುನಿಯಾವನ್ನು ಓದಿ