ಸ್ಫೋಟ ನಡೆಸಿದ ಸ್ಥಳ ಮಜರು ನಡೆಸಿದ ಪೊಲೀಸರು: ಸಾಲುಸಾಲು ಪ್ರಶ್ನೆಗಳಿಗೆ ಡ್ರೋನ್‌ ಪ್ರತಾಪ್‌ ತಬ್ಬಿಬ್ಬು

Sampriya

ಶುಕ್ರವಾರ, 13 ಡಿಸೆಂಬರ್ 2024 (14:24 IST)
Photo Courtesy X
ತುಮಕೂರು: ಕೃಷಿ ಹೊಂಡದಲ್ಲಿ ಸೋಡಿಯಂ ಹಾಕಿ ಸ್ಫೋಟ ಮಾಡಿದ ಪ್ರಕರಣದಲ್ಲಿ ಪೊಲೀಸರ ಅತಿಥಿಯಾಗಿರುವ ಬಿಗ್ ಬಾಸ್ ಮಾಜಿ ಸ್ಪರ್ಧಿ ಡ್ರೋನ್ ಪ್ರತಾಪ್‌ ಪೊಲೀಸರ ಸಾಲು ಸಾಲು ಪ್ರಶ್ನೆಗೆ ತಬ್ಬಿಬ್ಬಾಗಿದ್ದಾರೆ.

ಬಂಧನಕ್ಕೆ ಒಳಗಾಗಿರುವ ಡ್ರೋನ್‌ ಪ್ರತಾಪ್‌ನನ್ನು ತುಮಕೂರು ಪೊಲೀಸರು ಘಟನಾ ಸ್ಥಳಕ್ಕೆ ಕರೆತಂದು ಮಹಜರು ನಡೆಸಿದ್ದಾರೆ. ಈ ವೇಳೆ ಪ್ರತಾಪ್‌ಗೆ ಒಂದರ ಮೇಲೆ ಒಂದು ಪ್ರಶ್ನೆ ಕೇಳಿದ್ದಾರೆ.

ನೀವು ಯಾರೆಲ್ಲ ಬಂದಿದ್ದೀರಿ? ಸ್ನೇಹಿತನ ಹೆಸರೇನು? ಯಾವ ಕಾರಲ್ಲಿ ಬಂದಿದ್ರಿ ಅಂತ ಪೊಲೀಸರು ಪ್ರಶ್ನೆ ಕೇಳಿದ್ದಾರೆ.  ಐ20 ಕಾರಲ್ಲಿ ಬಂದಿದ್ವಿ ಅಂತ ಪ್ರತಾಪ್‌ ಉತ್ತರಿಸಿದ್ದಾರೆ. ಬಳಿಕ ಸಾರ್ವಜನಿಕ ಸ್ಥಳದಲ್ಲಿ ಹೀಗೆ ಮಾಡೋದು ತಪ್ಪಲ್ವಾ? ಅಂತ ಪ್ರಶ್ನೆ ಮಾಡಿದ್ದಕ್ಕೆ ತಬ್ಬಿಬ್ಬಾದ ಅವರು ಹೌದು ಎಂದು ತಲೆಯಾಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾರ್ವಜನಿಕರು ಓಡಾಡುವ ರಸ್ತೆ ಪಕ್ಕದಲ್ಲಿಯೇ ಡ್ರೋನ್ ಪ್ರತಾಪ್ ಸ್ಫೋಟ ಮಾಡಿದ ಕೃಷಿಹೊಂಡ ಇದೆ. ಸ್ಫೋಟ ಕಂಡು ಸಮೀಪದಲ್ಲೇ ದನ, ಕುರಿ ಮೇಯಿಸುತ್ತಿದ್ದವರು ಭಯಭೀತರಾಗಿದ್ದರು. ಒಂದು ವೇಳೆ ಗಾಳಿ ಜೋರಾಗಿ ಬೀಸಿದ್ದರೆ ಬೆಂಕಿಯ ಜ್ವಾಲೆ ರಸ್ತೆಗೂ ಪಸರಿಸುತಿತ್ತು, ಪ್ರತಾಪ್ ನ ಕೈ ಸುಟ್ಟ ಹಾಗೆ, ಸಾರ್ವಜನಿಕರಿಗೂ ಬೆಂಕಿ ತಗುಲಿ ಅಪಾಯವಾಗುತ್ತಿತ್ತು ಎಂದು ಸ್ಥಳೀಯರು ದೂರಿದ್ದಾರೆ.

ಡ್ರೋನ್‌ ಪ್ರತಾಪ್‌, ರಾಯರ ಬೃಂದಾವನ ಫಾರಂನ ಮಾಲೀಕ ಜಿತೇಂದ್ರ ಜೈನ್ ಹಾಗೂ ವಿಡಿಯೋ ಚಿತ್ರೀಕರಣ ಮಾಡಿದ ಮತ್ತೋರ್ವ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಾಗಿದೆ. ಸದ್ಯ ಪೊಲೀಸರು ಪ್ರತಾಪ್‌ನನ್ನ ಕರೆತಂದು ಸ್ಥಳ ಮಹಜರು ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ