ಮದುವೆಗೆ ಹೊರಟಿದ್ದ ಖಾಸಗಿ ಬಸ್ ಪಲ್ಟಿ: 5 ಮಂದಿ ದುರ್ಮರಣ, 27 ಮಂದಿಗೆ ಗಾಯ

Sampriya

ಶುಕ್ರವಾರ, 20 ಡಿಸೆಂಬರ್ 2024 (19:11 IST)
ರಾಯಗಢ: ಕುಟುಂಬ ಸಮೇತ ಮದುವೆ ತೆರಳಿದ್ದ ಖಾಸಗಿ ಬಸ್ ಪಲ್ಟಿಯಾಗಿ 5 ಜನ ಸಾವನ್ನಪ್ಪಿ, 27 ಜನ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ರಾಯಗಢದಲ್ಲಿ ನಡೆದಿದೆ.

ಮೃತರನ್ನು ಸಂಗೀತಾ ಜಾಧವ್, ಗೌರವ್ ದಾರಾಡೆ, ಶಿಲ್ಪಾ ಪವಾರ್, ವಂದನಾ ಜಾಧವ್ ಎಂದು ಗುರುತಿಸಲಾಗಿದೆ. ಇನ್ನೋರ್ವ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಯಗಢ ಪೊಲೀಸ್ ವರಿಷ್ಠಾಧಿಕಾರಿ ಸೋಮನಾಥ್ ಘರ್ಗೆ ಮಾತನಾಡಿ, ಇಂದು (ಡಿ.20) ಬೆಳಿಗ್ಗೆ 9:30ರ ಸುಮಾರಿಗೆ ಈ ಅವಘಡ ಸಂಭವಿಸಿದೆ. ಕುಟುಂಬದ ಸದಸ್ಯರೆಲ್ಲರೂ ಸೇರಿ ಮದುವೆಗಾಗಿ ಖಾಸಗಿ ಬಸ್ (ಪರ್ಪಲ್ ಟ್ರಾವೆಲ್ಸ್)ನಲ್ಲಿ ಪುಣೆಯ ಲೋಹೆಗಾಂವ್‌ನಿಂದ ಮಹಾಡ್‌ನ ಬಿರ್ವಾಡಿಗೆ ಹೊರಟಿದ್ದರು. ಈ ವೇಳೆ ತಮ್ಹಿನಿ ಘಾಟ್ ಪ್ರದೇಶದಲ್ಲಿ ಚಾಲಕನ ನಿಯಂತ್ರಣ ತಪ್ಪಿದ್ದು, ಬಸ್ ಕಮರಿಗೆ ಉರುಳಿದೆ ಎಂದರು.

ಘಟನಾ ಸ್ಥಳಕ್ಕೆ ಮಾಂಗಾವ್ ಪೊಲೀಸ್ ಠಾಣೆಯ ತಂಡ ಆಗಮಿಸಿ ಗಾಯಗೊಂಡವರನ್ನು ಮಾಂಗಾವ್ ಗ್ರಾಮೀಣ ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಬಸ್ ಚಾಲಕನ ನಿರ್ಲಕ್ಷ್ಯದಿಂದಾಗಿ ಈ ಅವಘಡ ಸಂಭವಿಸಿದೆ. ಚಾಲಕನ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ