ರಾಜ್ಯಾದ್ಯಂತ ಸರ್ಕಾರಿ ನೌಕರರ ಪ್ರತಿಭಟನೆ ಕಿಚ್ಚು

ಬುಧವಾರ, 1 ಮಾರ್ಚ್ 2023 (19:05 IST)
ಇಡೀ ರಾಜ್ಯವೇ ಇವತ್ತು ಆ ಒಂದು ಹೋರಾಟದತ್ತ ಮುಖಮಾಡಿ ನಿಂತಿತ್ತು.ಯಾವ ಕ್ಷಣದಲ್ಲಿ ಏನಾಗುತ್ತೋ ಅನ್ನೋ ಕುತೂಹಲ ಒಂದೆಡೆಯಾದ್ರೆ, ನಮ್ಮ ಕೆಲಸ,ಕಾರ್ಯಗಳ ಗತಿಯೇನು ಅನ್ನೋ ಚಿಂತೆ ಜನರನ್ನ ತಮಗೆ ಗೊತ್ತಿಲ್ಲದಂತೆ ಆ ಪ್ರತಿಭಟನೆ ಕಡೆ ತಿರುಗಿನೋಡುವಂತೆ ಮಾಡಿತ್ತು. ಇತ್ತ ರಾಜ್ಯ ರಾಜಧಾನಿಯ ಆಡಳಿತ ಯಂತ್ರಕ್ಕೆ ಆ ಪ್ರತಿಭಟನೆಯ ಕಿಚ್ಚು ನಡುಕಹುಟ್ಟಿಸಿತ್ತು.ಇವತ್ತು ಆಸ್ಪತ್ರೆ ತೆಗೆಯಲ್ವಂತೆ, ಬಸ್ ಗಳು ರಸ್ತೆಗಿಳಿಯಲ್ವಂತೆ, ಡಾಕ್ಟರ್ ಬರ್ತಾರೋ ಇಲ್ವೋ ಗೊತ್ತಿಲ್ಲ..ವಿಧಾನಸೌಧನೇ ಖಾಲಿಯಂತೆ...ಇವತ್ತು ಸಿಲಿಕಾನ್ ಸಿಟಿ ಜನರ ಬಾಯಲ್ಲಿ ಕೇಳಿಬರ್ತಿದ್ದ ಮಾತುಗಳಿವು. 7ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಸರ್ಕಾರಿ ನೌಕರರು ಕರೆ ನೀಡಿದ್ದ ಪ್ರತಿಭಟನೆ, ಈ ರೀತಿಯ ಅಭಿಪ್ರಾಯಗಳನ್ನ ಸೃಷ್ಟಿಮಾಡಿತ್ತು.

 7 ನೇ ವೇತನ ಆಯೋಗ, OPS ಜಾರಿಗೆ ಆಗ್ರಹಿಸಿ ಸರ್ಕಾರಿ ನೌಕರರು ಕರೆನೀಡಿದ್ದ ಹೋರಾಟಕ್ಕೆ ರಾಜ್ಯ ರಾಜಧಾನಿಯಲ್ಲಿ ಉತ್ತಮ ಪ್ರತಿಕ್ರಿಯ ವ್ಯಕ್ತವಾಯ್ತು. ಸದಾ ಅಧಿಕಾರಿಗಳ ದಂಡೇ ಇರ್ತಿದ್ದ ವಿಧಾನಸೌಧ ಇವತ್ತು ಖಾಲಿ ಖಾಲಿಯಾಗಿತ್ತು. ಇನ್ನು ಹಲವೆಡೆ ಪರೀಕ್ಷೆಗಳಿಗೂ ಕೂಡ ಪ್ರತಿಭಟನೆಯ ಬಿಸಿ ತಟ್ಟಿತ್ತು. ಇನ್ನು ಕೆಲ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತಿಭಟನೆಗೆ ಬೆಂಬಲ ವ್ಯಕ್ತವಾದ್ರೆ, ವಿಕ್ಟೋರಿಯ, ವಾಣಿವಿಲಾಸ, ಕೆ ಸಿ ಜನರಲ್ ಆಸ್ಪತ್ರೆಯಲ್ಲಿ ಸಿಬ್ಬಂದಿ ಕಪ್ಪುಪಟ್ಟಿ ಧರಿಸಿ ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿದ್ರು. ಇನ್ನು ಸರ್ಕಾರಿ ನೌಕರರ ಪ್ರತಿಭಟನೆಗೆ ಸಾರಿಗೆ ನೌಕರರು ನೈತಿಕ ಬೆಂಬಲ ನೀಡಿದ್ರು, ಪ್ರತಿಭಟನೆ ನಡುವೆಯೂ ನಗರದಲ್ಲಿ ಎಂದಿನಂತೆ ಬಸ್ ಸಂಚಾರವಿತ್ತು.ಇತ್ತ ಪೌರಕಾರ್ಮಿಕರು ಪಾಲಿಕೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ನಮ್ಮ ಸಪೋರ್ಟ್ ಇದೆ ಅನ್ನೋದನ್ನ ಸಾಬೀತುಪಡಿಸಿದ್ರು.

 ಇತ್ತ ನಿನ್ನೆ ರಾತ್ರಿಯಿಂದ ಸಭೆ ಮೇಲೆ ಸಭೆ ನಡೆಸಿದ್ದ ಸರ್ಕಾರ ಕೂಡ ಸರ್ಕಾರಿ ನೌಕರರ ಹೋರಾಟದಿಂದ ಟೆನ್ಷನ್ ಗೆ ಒಳಗಾಗಿತ್ತು. ಎಷ್ಟೇ ಮನವೊಲಿಸಿದ್ರು ಪಟ್ಟುಬಿಡದ ನೌಕರರ ಸಂಘದ ಮುಂದೆ ಸರ್ಕಾರ ಮಂಡಿಯೂರಬೇಕಾಯಿತು. ಏಪ್ರಿಲ್ ನಿಂದ ಶೇಕಡ 17 ರಷ್ಟು  ವೇತನ ಹೆಚ್ಚಳ ಮಾಡ್ತೀವಿ ಅಂತಾ ಲಿಖಿತ ಆದೇಶ ನೀಡಿದ ಬಳಿಕ ಸರ್ಕಾರಿ ನೌಕರರು ಪ್ರತಿಭಟನೆಗೆ ಮಂಗಳ ಹಾಡಿದ್ರು. ಒಟ್ಟಿನಲ್ಲಿ ತಮ್ಮ ಬೇಡಿಕೆಗಳಿಗೆ ಪಟ್ಟುಹಿಡಿದಿದ್ದ ಸರ್ಕಾರಿ ನೌಕರರು ಕೊನೆಗೂ ಜಯಭೇರಿ ಬಾರಿಸಿದ್ದಾರೆ. ಸರ್ಕಾರಿ ನೌಕರರ ಪ್ರತಿಭಟನೆಯ ಪರಿಣಾಮ ಅರಿತ ಸರ್ಕಾರ,  ಸದ್ಯ ತಾತ್ಕಾಲಿಕ ಭರವಸೆ ನೀಡಿದೆ.ಸದ್ಯ ಸರ್ಕಾರದ ವಿರುದ್ಧ ಸಿಡಿದೆದ್ದ ನೌಕರರನ್ನ ಸರ್ಕಾರ ಜಾಣನಡೆ ಮೂಲಕ ತಣ್ಣಗಾಗಿಸಿದೆ ಸರ್ಕಾರ ಕೊಟ್ಟ ಮಾತನ್ನ ಉಳಿಸಿಕೊಳ್ಳುತ್ತಾ, ಇಲ್ಲಾ ಮತ್ತೆ ಸರ್ಕಾರಿ ನೌಕರರ ಆಕ್ರೋಶದ ಕಟ್ಟೆ ಒಡೆಯುತ್ತಾ ಅನ್ನೋದನ್ನ ಕಾದುನೋಡಬೇಕಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ