ಶಕ್ತಿಯೋಜನೆಯಿಂದ ಲಾಭ ಅಂತಾರೆ, ಬಸ್ ಟಿಕೆಟ್ ದರ ಏರಿಕೆ ಮಾಡ್ತಾರೆ: ಜನರ ಆಕ್ರೋಶ

Krishnaveni K

ಶುಕ್ರವಾರ, 3 ಜನವರಿ 2025 (09:49 IST)
ಬೆಂಗಳೂರು: ರಾಜ್ಯದಲ್ಲಿ ಬಸ್ ಟಿಕೆಟ್ ದರ ಹೆಚ್ಚಳ ಮಾಡಿರುವುದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಒಂದು ಕಡೆ ಶಕ್ತಿ ಯೋಜನೆ ಲಾಭ ತಂದಿದೆ ಅಂತಾರೆ ಇನ್ನೊಂದು ಕಡೆ ಟಿಕೆಟ್ ದರ ಏರಿಕೆ ಮಾಡ್ತಾರೆ ಎಂದು ಹಿಡಿಶಾಪ ಹಾಕಿದ್ದಾರೆ.

ರಾಜ್ಯ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗಾಗಿ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ನೀಡುವ ಶಕ್ತಿ ಯೋಜನೆ ಜಾರಿಗೆ ತಂದಿದೆ. ಈ ಯೋಜನೆ ಜಾರಿಗೆ ತಂದ ಬಳಿಕ ಸಾರಿಗೆ ಇಲಾಖೆ ಲಾಭದಲ್ಲಿದೆ ಎಂದು ಸರ್ಕಾರ ಹೇಳಿಕೊಳ್ಳುತ್ತಿದೆ.

ಆದರೆ ನಿನ್ನೆ ಏಕಾಏಕಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಪ್ರಯಾಣ ದರ ಶೇ.15 ರಷ್ಟು ಹೆಚ್ಚಳ ಮಾಡುವ ಘೋಷಣೆ ಮಾಡಿದ್ದಾರೆ. ಜನವರಿ 5 ರಿಂದಲೇ ಈ ಹೊಸ ದರ ಜಾರಿಗೆ ಬರಲಿದೆ ಎಂದಿದ್ದಾರೆ. ದರ ಏರಿಕೆ ಮಾಡಿದ ಬಳಿಕ ಸಮಜಾಯಿಷಿ ನೀಡಿದ ಅವರು ಶಕ್ತಿ ಯೋಜನೆ ನಮಗೆ ಲಾಭ ತಂದುಕೊಟ್ಟಿದೆ. ಆದರೆ ಕಳೆದ 10 ವರ್ಷಗಳಿಂದ ದರ ಏರಿಕೆ ಮಾಡಿಲ್ಲ. ಬಿಜೆಪಿ ಸರ್ಕಾರವಿದ್ದಾಗ ಸಾರಿಗೆ ಸಂಸ್ಥೆಯನ್ನು ನಷ್ಟದಲ್ಲಿ ಬಿಟ್ಟು ಹೋಗಿತ್ತು. ನಮ್ಮ ಶಕ್ತಿ ಯೋಜನೆಯಿಂದ ಲಾಭವಾಗಿದೆ. ನಮ್ಮ ಸರ್ಕಾರದಲ್ಲಿ ಟೈಂಗೆ ಸರಿಯಾಗಿ ಸಂಬಳವಾಗುತ್ತಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಟಿಕೆಟ್ ದರ ಕಡಿಮೆಯೇ ಇದೆ. ಆದರೆ ಈಗ ಸಿಬ್ಬಂದಿ ವೆಚ್ಚ ಹೆಚ್ಚಾಗಿದೆ, ಡೀಸೆಲ್, ಪೆಟ್ರೋಲ್ ಬೆಲೆ ಹೆಚ್ಚಳವಾಗಿದೆ. ಹೀಗಾಗಿ ದರ ಏರಿಕೆ ಅನಿವಾರ್ಯ ಎಂದು ಸಮಜಾಯಿಷಿ ಕೊಟ್ಟಿದ್ದಾರೆ.

ಆದರೆ ಇದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಕ್ತಿ ಯೋಜನೆ ಲಾಭ ತಂದಿದೆ ಎಂದಾದರೆ ಟಿಕೆಟ್ ದರ ಹೆಚ್ಚಳ ಮಾಡುವುದು ಯಾಕೆ? ಯಾವುದೇ ದರ ಹೆಚ್ಚಳ ಮಾಡಿದರೂ ಈ ಸರ್ಕಾರ ಇದೇ ಕಾರಣ ನೀಡುತ್ತಿದೆ. ಹಲವು ಸಮಯದಿಂದ ಹೆಚ್ಚಳವಾಗಿರಲಿಲ್ಲ ಅನ್ನೋದು, ದರ ಏರಿಕೆ ಮಾಡೋದು ಅಭ್ಯಾಸವಾಗಿಬಿಟ್ಟಿದೆ. ಈ ಉತ್ತರಗಳನ್ನು ಮೊದಲೇ ಸಿದ್ಧ ಮಾಡಿಟ್ಟುಕೊಂಡಿದ್ದಾರೆ ಎನಿಸುತ್ತದೆ ಎಂದು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ