ಬೆಟ್ಟದ ಹೂವಾಗಿ ಅರಳಿ, ಬಳಿಕ ದೊಡ್ಮನೆ ಹುಡುಗನಾಗಿ ಬೆಳೆದು, ಇಡೀ ದೇಶವೇ ಕೊಂಡಾಡುವಂತ ಅಪ್ಪು ನಮ್ಮನ್ನು ಅಗಲಿ ನಾಲ್ಕೂವರೆ ತಿಂಗಳುಗಳೇ ಕಳೆದಿವೆ. ಅವರು ಮಾಡಿದ ಸಾಮಾಜಿಕ ಸೇವೆ ಪುರಸ್ಕರಿಸಿ ರಾಜ್ಯ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿ ನೀಡಿದ್ರೆ.
ಮೈಸೂರು ವಿಶ್ವವಿದ್ಯಾಲಯ ಗೌರವ ಡಾಕ್ಟರ್ ರೇಟ್ ಪದವಿ ಕೊಟ್ಟು ಅಪ್ಪವಿಗೆ ನಮನ ಸಲ್ಲಿಸಿದೆ. ಇತ್ತ ರಾಜ್ಯದಲ್ಲಿ ಅಪ್ಪುವಿನ ಜೀವನದ ಯಶೋಗಾಥೆಯನ್ನ ಕನ್ನಡ ಪುಸ್ತಕಕ್ಕೆ ಸೇರಿಸಲು ಅಭಿಮಾನಿಗಳು ನಿರಂತರವಾಗಿ ಅಭಿಯಾನ ಶುರು ಮಾಡಿದ್ದು, ಅದಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.
ಪವರ್ ಸ್ಟಾರ್ ಅಪ್ಪು ಅಭಿಮಾನಿ ದೇವರಾಜು ಅರಸು ಸರ್ಕಾರದ ಗಮನ ಸೆಳೆಯುವ ವಿಶೇಷ ಅಭಿಯಾನ ಶುರು ಮಾಡಿದ್ದಾರೆ. ಅಪ್ಪು ಸಮಾಧಿ ಸ್ಥಳ, ಜಿಲ್ಲಾ ಕೇಂದ್ರಗಳು ಸೇರಿದಂತೆ ವಿವಿಧೆಡೆ ಸಹಿ ಸಂಗ್ರಹಿಸಿದರು. ಜೊತೆಗೆ ಇದೀಗ ಮಠಾಧಿಪತಿಗಳು, ರಾಜಕಾರಣಿಗಳನ್ನು ಭೇಟಿ ಮಾಡಿ ಬೆಂಬಲ ಕೋರಿ ಮನವಿ ಸಲ್ಲಿಸಿದ್ದಾರೆ. ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಶ್ರೀ, ಮಂತ್ರಾಲಯದ ರಾಘವೇಂದ್ರ ಮಠದ ಶ್ರೀಗಳಿಗೆ ಪತ್ರ ಬರೆದಿದ್ದಾರೆ. ಅಪ್ಪು ಸಾಧನೆ ಕನ್ನಡ ಪಠ್ಯ ಪುಸ್ತಕಕ್ಕೆ ಸೇರಬೇಕು. ಅವರ ಜೀವನ ಚರಿತ್ರೆ ಮಕ್ಕಳಿಗೆ ಸ್ಪೂರ್ತಿಯಾಗಬೇಕು ಇದಕ್ಕೆ ನಿಮ್ಮ ಬೆಂಬಲ, ಆಶೀರ್ವಾದ ಬೇಕು ಅಂತಾ ಮನವಿ ಮಾಡಿದ್ದಾರೆ.
ಇನ್ನು ಅಪ್ಪು ಅಭಿಮಾನಿ ದೇವರಾಜು ಅರಸು ಅಭಿಯಾನಕ್ಕೆ ರಾಜಕಾರಣಿಗಳಿಂದಲೂ ಪ್ರಶಂಸೆ ಸಿಕ್ಕಿದೆ. ಇತ್ತೀಚೆಗಷ್ಟೇ ದೇವರಾಜು ಮಾಜಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿ ಮನವಿ ಸಲ್ಲಿಸಿ, ಬೆಂಬಲ ಕೋರಿದ್ದಾರೆ. ಅಪ್ಪು ಅಭಿಮಾನಿಯ ವಿಶೇಷ ಅಭಿಯಾನಕ್ಕೆ ಉತ್ತಮ ಅಭಿಯಾನ ಎಂದು ಬೆಂಬಲಿಸಿ, ನಾನು ಕೂಡ ಸರ್ಕಾರದ ಗಮನಕ್ಕೆ ಒತ್ತಾಯ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಇದರ ಜೊತೆಗೆ ರಾಜ್ಯದ ವಿವಿಧ ಸಂಘಟನೆಗಳು ಹಾಗೂ ಅಭಿಮಾನಿಗಳಿಂದ ಉತ್ತಮ ಬೆಂಬಲ ಬರುತಿದ್ದು, ಸರ್ಕಾರದ ಗಮನವನ್ನೂ ಸೆಳೆದಿದೆ.