ಎಸ್ಪಿ ಬೆಂಬಲದಿಂದ ವಿನಯ್ ಸೋಮಣ್ಣಗೆ ಕಿರುಕುಳ: ಆರ್.ಅಶೋಕ್ ಆರೋಪ

Krishnaveni K

ಶುಕ್ರವಾರ, 4 ಏಪ್ರಿಲ್ 2025 (17:46 IST)
ಬೆಂಗಳೂರು: ‘ಆತ್ಮಹತ್ಯೆ ಮಾಡಿಕೊಂಡ ಮಡಿಕೇರಿಯ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಅವರಿಗೆ ನಿರಂತರವಾಗಿ ಕಾಂಗ್ರೆಸ್ಸಿನ ಎಂಎಲ್‍ಎಗಳ ಆಪ್ತ ತನ್ನೀರ್ ಮೈನಾ ಅವರು ಅಲ್ಲಿನ ಎಸ್‍ಪಿ ಬೆಂಬಲದಿಂದ ಕಿರುಕುಳ ಕೊಡಲಾಗುತ್ತಿತ್ತು. ಈ ಸಾವಿಗೆ ಈ ಮೂರು ಜನ ಮತ್ತು ಎಸ್‍ಪಿ ನೇರ ಕಾರಣ’ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಅವರು ಆರೋಪಿಸಿದ್ದಾರೆ.

ಮಡಿಕೇರಿಯ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯರವರು ಅಕಾಲಿಕ  ನಿಧನರಾಗಿದ್ದು, ಅವರಿಗೆ ಅಂತಿಮ ನಮನ ಸಲ್ಲಿಸಲು ಬೆಂಗಳೂರಿನ ಡಾ. ಬಿ.ಆರ್.ಅಂಬೇಡ್ಕರ್ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ‘ಸೋಷಿಯಲ್ ಮೀಡಿಯದ ಒಂದು ಪೋಸ್ಟನ್ನು ಫಾರ್ವರ್ಡ್ ಮಾಡಿದ್ದಕ್ಕೆ ಕಿರುಕುಳ ಕೊಡಲಾಗಿದೆ. ಇದಕ್ಕೆ ದಾಖಲೆಗಳಿವೆ; ಡೆತ್ ನೋಟಿನಲ್ಲೂ ತಿಳಿಸಿದ್ದಾರೆ’ ಎಂದರು.

‘ಎಂಎಲ್‍ಎ ಕೂಡ ಧಮ್ಕಿ ಹಾಕಿದ್ದಾರೆ. ವಿನಯ್ ಅವರು ಹೈಕೋರ್ಟಿನಲ್ಲಿ ಜಾಮೀನು ಪಡೆದಿದ್ದಾರೆ. ಅವರ ಬೆಂಗಳೂರು ಮನೆಗೂ ಪೊಲೀಸರು ಬಂದಿದ್ದರು’ ಎಂದು ಟೀಕಿಸಿದರು. ‘ಪೊಲೀಸ್ ಸ್ಟೇಷನ್‍ಗಳನ್ನು ಕಾಂಗ್ರೆಸ್ ಕಚೇರಿ ಮಾಡಿಕೊಂಡಿದ್ದಾರೆ. ಪೊಲೀಸರ ಮೇಲೆ ಒತ್ತಡ ಹೇರುತ್ತಾರೆ. ಈ ಮೂಲಕ ರಾಜಕೀಯ ದ್ವೇಷ ತೀರಿಸಿಕೊಳ್ಳಲು ಬಳಸಲಾಗುತ್ತಿದೆ’ ಎಂದು ಆಕ್ಷೇಪಿಸಿದರು.
‘ಮುಂದಿನ ಹೋರಾಟದ ಕುರಿತು ಪಕ್ಷದ ಮುಖಂಡರ ಜೊತೆಗೂಡಿ ಚರ್ಚಿಸಿ ತೀರ್ಮಾನಿಸುತ್ತೇವೆ. ಯಾವುದೇ ಕಾರಣಕ್ಕೂ ಅವರ ಕುಟುಂಬದ ಜೊತೆ ನಾವಿದ್ದೇವೆ. ಅವರಿಗೆ ನ್ಯಾಯ ಕೊಡಿಸುತ್ತೇವೆ’ ಎಂದು ತಿಳಿಸಿದರು.

‘ತನ್ನೀರ್ ಮೈನಾ, ಪೊನ್ನಣ್ಣ, ಮಂಥರ್ ಗೌಡ ಅವರ ಹೆಸರನ್ನು ದೂರಿನಲ್ಲಿ ಉಲ್ಲೇಖಿಸಿದ್ದಾರೆ’ ಎಂದ ಅವರು, ‘ಕೊಡಗಿನಲ್ಲಿ ಪ್ರತಿಭಟನೆ ಮಾಡಲಿದ್ದೇವೆ’ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್, ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ ಅವರು ಈ ಸಂದರ್ಭದಲ್ಲಿ ಇದ್ದರು.
 
 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ